ADVERTISEMENT

‘ಹಿಂದೂ ವಿರೋಧಿ’ ಅಭಿಪ್ರಾಯ ಬದಲಿಸಲು ಎಸ್‌ಪಿ ಪ್ರಯತ್ನ

ಅಖಿಲೇಶ್‌, ಜಯಂತ್‌ ಚೌಧರಿಯನ್ನು ರಾಮ, ಲಕ್ಷ್ಮಣರಂತೆ ಬಿಂಬಿಸಿದ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:40 IST
Last Updated 24 ಡಿಸೆಂಬರ್ 2021, 19:40 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ರನ್ನು ಹಿಂದೂ ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿರುವ ವೇಳೆಯೇ ಆ ಅಭಿಪ್ರಾಯವನ್ನು ಬದಲಿಸಲು ಎಸ್‌ಪಿ ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.

ಅಲಿಗಡ ಜಿಲ್ಲೆಯ ಇಗ್ಲಾಸ್‌ನಲ್ಲಿ ಎಸ್‌ಪಿ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಗುರುವಾರ ಜಂಟಿಯಾಗಿ ನಡೆಸಿದ ಸಾರ್ವಜನಿಕ ರ‍್ಯಾಲಿಯಲ್ಲಿ ಅಖಿಲೇಶ್‌ ಯಾದವ್‌ ಮತ್ತು ಆರ್‌ಎಲ್‌ಡಿ ಅಧ್ಯಕ್ಷ ಜಯಂತ್‌ ಚೌಧರಿ ಅವರು ರಾಮ ಮತ್ತು ಲಕ್ಷ್ಮಣರ ರೂಪದಲ್ಲಿದ್ದ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿತ್ತು. ಅಖಿಲೇಶ್‌ ಹಿಂದುತ್ವದ ಪರ ಎಂದು ಬಿಂಬಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಸ್ಥಳೀಯ ಜಾನಪದ ಗಾಯಕರು ಅಲ್ಲಿಯ ಆಡುಭಾಷೆಯಲ್ಲಿ ಹಾಡುಗಳನ್ನು ಹಾಡಿದರು. ಆ ಹಾಡುಗಳಲ್ಲೂ ಈ ಇಬ್ಬರು ನಾಯಕರನ್ನು ರಾಮ ಮತ್ತು ಲಕ್ಷ್ಮಣ ಎಂದು ಬಿಂಬಿಸಲಾಗಿತ್ತು. ರಾಮ, ಲಕ್ಷ್ಮಣರ ಉಲ್ಲೇಖವಾದಾಗಲೆಲ್ಲಾ ಎಸ್‌ಪಿ, ಆರ್‌ಎಲ್‌ಡಿ ಬೆಂಬಲಿಗರ ಹರ್ಷೋದ್ಗಾರ ಕೇಳಿಬರುತ್ತಿತ್ತು.

ಅಖಿಲೇಶ್‌ ಮತ್ತು ಜಯಂತ್‌ ಇಬ್ಬರೂ ರಾಮ ಮತ್ತು ಲಕ್ಷ್ಮಣರ ಹಾಗೇ ಸಹೋದರರ ರೀತಿ ಇದ್ದರು. ಅವರನ್ನು ರಾಮ, ಲಕ್ಷ್ಮಣರಂತೆ ಬಿಂಬಿಸುವುದರಲ್ಲಿ ಯಾವುದೇ ತಪ್ಪು ಇಲ್ಲ. ಜನರನ್ನು ಹೆದರಿಸುತ್ತಿದ್ದ ರಾಕ್ಷಸರನ್ನು ರಾಮ ಮತ್ತು ಲಕ್ಷ್ಮಣರು ಒಟ್ಟಿಗೆ ಸೇರಿ ಸಂಹಾರ ಮಾಡಿದಂತೆ, ದುರಾಡಳಿತಕ್ಕೆ ಹೆಸರಾಗಿರುವ ಬಿಜೆಪಿಯನ್ನು ಸೋಲಿಸಲು ಇವರಿಬ್ಬರೂ ಒಟ್ಟಾಗಿದ್ದಾರೆ ಎಂದು ಅಲಿಗಡದ ಎಸ್‌ಪಿ ಮುಖಂಡರೊಬ್ಬರು ಹೇಳಿದರು.

ADVERTISEMENT

ಅಖಿಲೇಶ್‌ರನ್ನು ‘ಹಿಂದೂ ವಿರೋಧಿ’ ಮತ್ತು ‘ಮುಸ್ಲಿಂ ಪರ’ ಎಂದು ಬಿಜೆಪಿ ಬಿಂಬಿಸುತ್ತಿದೆ. ಬಿಜೆಪಿಯ ಪ್ರಯತ್ನಕ್ಕೆ ಉತ್ತರ ನೀಡಲು ಎಸ್‌ಪಿ ತಯಾರಾಗಿದೆ. ಮತ ಧ್ರುವೀಕರಣ ಮಾಡಲು ತನ್ನನ್ನು ‘ಹಿಂದೂ ಉದ್ಧಾರಕ’ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಅವರ ಈ ಪ್ರಯತ್ನಕ್ಕೆ ನಾವು ಅಡ್ಡಿಪಡಿಸಬೇಕು ಎಂದು ಎಸ್‌ಪಿ ಮೂಲಗಳು ಹೇಳಿವೆ.

1990ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ನಡೆದಿದ್ದ ಗುಂಡಿನ ದಾಳಿ ಕುರಿತು ಬಿಜೆಪಿ ಚುನಾವಣಾ ರ‍್ಯಾಲಿಗಳಲ್ಲಿ ಪ್ರಸ್ತಾಪಿಸುತ್ತಿದೆ. ಗುಂಡಿನ ದಾಳಿ ನಡೆದ ವೇಳೆ ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್‌ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. ಹಾಗಾಗಿ ಅಖಿಲೇಶ್‌ ‘ಹಿಂದೂ ವಿರೋಧಿ’ ಎಂದು ಬಿಜೆಪಿ ರ‍್ಯಾಲಿಗಳಲ್ಲಿ ಕೇಳಿ ಬರುತ್ತಿದೆ.

ಅಖಿಲೇಶ್‌ ಆಡಳಿತ ಮುಸ್ಲಿಂ ಪರವಾಗಿತ್ತು. ಅವರು ಹಿಂದೂಗಳಿಗೆ ಹಬ್ಬಗಳನ್ನು ಆಚರಿಸಲು ಅನುವು ಮಾಡಿರಲಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಮುಸ್ಲಿಮರಿಗೆ ಹೆಚ್ಚು ಪಡಿತರ ನೀಡಲಾಗುತ್ತಿತ್ತು ಎಂಬುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದರು.

ಇತ್ತೀಚೆಗೆ ರಾಯಬರೇಲಿಯಲ್ಲಿ ಎಸ್‌ಪಿ ರ‍್ಯಾಲಿ ನಡೆದ ವೇಳೆ ಅಖಿಲೇಶ್‌ರನ್ನು ಶ್ರೀಕೃಷ್ಣನಿಗೆ ಹೋಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.