ADVERTISEMENT

ಅಖಿಲೇಶ್‌ಗೆ ದಿಗ್ಬಂಧನ: ಹಿಂಸಾಚಾರ

ವಿಮಾನ ಏರದಂತೆ ತಡೆ: ಬೀದಿಗಿಳಿದ ಎಸ್‌.ಪಿ. ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:30 IST
Last Updated 12 ಫೆಬ್ರುವರಿ 2019, 20:30 IST
ವಿಮಾನ ಏರದಂತೆ ಬಾಗಿಲಿಗೆ ಅಡ್ಡವಾಗಿ ಅಧಿಕಾರಿ ನಿಂತರು ಎಂದು ಆರೋಪಿಸಿ ಅಖಿಲೇಶ್‌ ಅವರೇ ಟ್ವೀಟ್‌ ಮಾಡಿದ ಚಿತ್ರ
ವಿಮಾನ ಏರದಂತೆ ಬಾಗಿಲಿಗೆ ಅಡ್ಡವಾಗಿ ಅಧಿಕಾರಿ ನಿಂತರು ಎಂದು ಆರೋಪಿಸಿ ಅಖಿಲೇಶ್‌ ಅವರೇ ಟ್ವೀಟ್‌ ಮಾಡಿದ ಚಿತ್ರ   

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದ ಚೌಧರಿ ಚರಣ್‌ಸಿಂಗ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಂಗಳವಾರ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಯಿತು.

ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಂಗಳವಾರ ಬೆಳಿಗ್ಗೆ ಪ್ರಯಾಗರಾಜ್‌ಗೆ ಹೊರಟಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥಅಖಿಲೇಶ್ ಯಾದವ್‌ ಅವರನ್ನು ಪೊಲೀಸರು ವಿಮಾನ ಏರದಂತೆ ತಡೆದರು.

ಅಖಿಲೇಶ್‌ ಯಾದವ್‌ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟ ನಡೆದಿದೆ. ಸೂಕ್ತ ಕಾರಣ ಮತ್ತು ಲಿಖಿತ ಆದೇಶವಿಲ್ಲದೆ ಪೊಲೀಸ್‌ ಅಧಿಕಾರಿಗಳು ತಮ್ಮನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಖಿಲೇಶ್‌ ಸರಣಿ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ADVERTISEMENT

ವಿಮಾನ ನಿಲ್ದಾಣದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಚಿತ್ರ ಮತ್ತು ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ವಿಷಯ ತಿಳಿಯುತ್ತಲೇ ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಸಂಘಟನೆಯ ಸದಸ್ಯರುಬೀದಿಗಿಳಿದು ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮತ್ತೊಂದೆಡೆ ಪ್ರಯಾಗರಾಜ್‌ನಲ್ಲಿ ವಿಶ್ವವಿದ್ಯಾಲಯ ಪ್ರವೇಶಿಸಲು ಮುಂದಾದ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಯ ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ಜತೆಗಿನ ಘರ್ಷಣೆಯಲ್ಲಿ ಸಮಾಜವಾದಿ ಪಕ್ಷದ ಶಾಸಕ ಧರ್ಮೇಂದ್ರ ಯಾದವ್‌ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನದಲ್ಲೂ ಈ ಘಟನೆ ಪ್ರತಿಧ್ವನಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ಸಮಾಜವಾದಿ ಪಕ್ಷದ ಶಾಸಕರು ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಿಎಸ್‌ಪಿ–ಎಸ್‌ಪಿ ಮೈತ್ರಿಯಿಂದ ಬಿಜೆಪಿ ಹೆದರಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.

ವಿದ್ಯಾರ್ಥಿಗಳ ಪದಗ್ರಹಣಕ್ಕೆರಾಜಕೀಯ ತಿರುವು

ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಸಮಾಜವಾದಿ ಪಕ್ಷದ ನಡುವೆ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಡಿಸೆಂಬರ್‌ನಲ್ಲಿ ನಡೆದ ಅಲಹಾಬಾದ್‌ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿತ ಉದಯ್‌ ಯಾದವ್‌ ನೇತೃತ್ವದ ಬಣ (ಸಮಾಜವಾದಿ ವಿದ್ಯಾರ್ಥಿ ಸಭಾ) ಗೆಲುವು ಸಾಧಿಸಿತ್ತು.

ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲುಅಖಿಲೇಶ್‌ ಯಾದವ್‌ಪೂರ್ವ ನಿಗದಿಯಂತೆ ಹೊರಟಾಗ ಅವರನ್ನು ತಡೆಯಲಾಗಿದೆ.

ಒಂದು ಹಂತದಲ್ಲಿ ಅಧಿಕಾರಿಯೊಬ್ಬರು ಅಖಿಲೇಶ್‌ ಮೈಮುಟ್ಟಿ ತಡೆಯಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ಅವರು ಮೈ ಮುಟ್ಟದಂತೆ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಅಖಿಲೇಶ್‌ ಅವರ ಭದ್ರತಾ ಸಿಬ್ಬಂದಿ ಅಧಿಕಾರಿಯನ್ನು ಪಕ್ಕಕ್ಕೆ ತಳ್ಳಿದರು. ಇದರಿಂದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ತಳ್ಳಾಟ ಮತ್ತು ಮಾತಿನ ಚಕಮಕಿ ನಡೆಯಿತು.

ವಿಮಾನದ ಮೆಟ್ಟಿಲು ಮತ್ತು ಬಾಗಿಲು ಬಳಿ ಅಡ್ಡಲಾಗಿ ನಿಂತ ಪೊಲೀಸ್‌ ಸಮವಸ್ತ್ರ ಧರಿಸದ ಅಧಿಕಾರಿಗಳ ಜತೆ ಅಖಿಲೇಶ್‌ ಮಾತಿನ ಚಕಮಕಿ ನಡೆಸಿರುವ ಚಿತ್ರ ಮತ್ತು ದೃಶ್ಯಗಳನ್ನು ಟ್ವೀಟ್‌ ಜತೆ ಹಾಕಿದ್ದಾರೆ.ಪ್ರಯಾಣ ಮಾಡದಂತೆ ತಡೆಯುವ ಆದೇಶ ತೋರಿಸುವಂತೆ ಅಖಿಲೇಶ್‌, ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿಯೇ ಸುದ್ದಿಗೋಷ್ಠಿ ನಡೆಸಿದ ಅಖಿಲೇಶ್‌, ‘ಇಂದು ಬೆಳಿಗ್ಗೆ 6.30ಕ್ಕೆ ಮನೆಯಿಂದ ಹೊರಟಾಗಲೇ ಅಧಿಕಾರಿಗಳು ಮನೆಯ ಸುತ್ತಮುತ್ತ ಬೀಡುಬಿಟ್ಟಿದ್ದರು’ ಎಂದು ಆರೋಪಿಸಿದರು.

ಅಖಿಲೇಶ್‌ಗೆ ಅಡ್ಡಿ: ಯೋಗಿ ಸಮರ್ಥನೆ

ಒಂದು ವೇಳೆ ಅಖಿಲೇಶ್‌ ಯಾದವ್‌ ಅವರಿಗೆ ಅಲಹಾಬಾದ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಿದ್ದರೆ ವಿದ್ಯಾರ್ಥಿಗಳ ಗುಂಪುಗಳ ನಡುವೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಅಖಿಲೇಶ್‌ ಭೇಟಿಯನ್ನು ರದ್ದು ಮಾಡುವಂತೆ ಅಲಹಾಬಾದ್‌ ವಿಶ್ವವಿದ್ಯಾಲಯವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಯೋಗಿ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಪದಗ್ರಹಣ ಸಮಾರಂಭ ನಡೆಸಲು ರಾಜಕೀಯ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಖಿಲೇಶ್‌ ಆಪ್ತ ಕಾರ್ಯದರ್ಶಿಗೆ ಸೋಮವಾರ ಪತ್ರ ಬರೆದಿದ್ದರು.

***

ಇದು ಯೋಗಿ ನೇತೃತ್ವದ ಬಿಜೆಪಿ ಸರ್ಕಾರದ ಚಿತಾವಣೆ. ಯಾವುದೇ ಕಾರಣ ಇಲ್ಲದೆ ತಮ್ಮನ್ನು ತಡೆಯಲಾಗಿದ್ದು ಸರ್ಕಾರದ ಹತಾಶ ಮನೋಭಾವದ ಪ್ರತೀಕವಾಗಿದೆ. ‘ರೋಕೊ, ತೋಕೊ ನೀತಿ’ (ತಡೆ ಮತ್ತು ಎನ್‌ಕೌಂಟರ್‌) ಮುಂದುವರಿಸಿದೆ

– ಅಖಿಲೇಶ್‌ ಯಾದವ್‌,ಸಮಾಜವಾದಿ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.