
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣವನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಅಪರಾಧದಿಂದ ಪಡೆದ ಆದಾಯದ ಮೂಲಕ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗಿದೆಯೇ ಎಂಬ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.
ಅಲ್ ಫಲಾಹ್ ಟ್ರಸ್ಟ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ, ಅಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ಕಳೆದ ನವೆಂಬರ್‌ನಲ್ಲಿ ಇ.ಡಿ ಬಂಧಿಸಿತು. ಟ್ರಸ್ಟ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು, ಬೋಧನೆಗೆ ಅಗತ್ಯವಿರುವ ಮಾನ್ಯತೆಯನ್ನು ಹೊಂದಿಲ್ಲ ಎಂದೂ ಹೇಳಿತು.
ಅಪರಾಧಗಳಿಂದ ಪಡೆಯಲಾದ ಹಣದ ಒಂದು ಭಾಗವನ್ನು ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಇ.ಡಿ ಶಂಕಿಸಿದೆ. ಅಲ್ ಫಲಾಹ್ ಸಂಸ್ಥೆಯ ವಿವಿಧ ಚರ ಮತ್ತು ಸ್ಥಿರ ಆಸ್ತಿಗಳನ್ನು ಗುರುತಿಸುವ ಹಾಗೂ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಇ.ಡಿ ಆರಂಭಿಸಿದೆ.
ವಿಶ್ವವಿದ್ಯಾಲಯದ ಆವರಣವನ್ನು ಮುಟ್ಟುಗೋಲು ಹಾಕಿಕೊಂಡರೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋಧನೆಗೆ ಅವಕಾಶ ನೀಡಲಾಗುವುದು ಎನ್ನಲಾಗಿದೆ.
ಡಾ. ಉಮರ್ ನಬಿ ಸೇರಿದಂತೆ ದೆಹಲಿ ಸ್ಫೋಟದ ಪ್ರಮುಖ ಆರೋಪಿಗಳು ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.