ADVERTISEMENT

ಮೇ 21ರಿಂದ ವಿವಿಧ ದೇಶಗಳಿಗೆ ಸರ್ವಪಕ್ಷ ನಿಯೋಗಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಮೇ 2025, 15:59 IST
Last Updated 18 ಮೇ 2025, 15:59 IST
   

ನವದೆಹಲಿ: ಪಾಕಿಸ್ತಾನದ ಭಯೋತ್ಪಾದನೆ ಕುರಿತು ವಿಶ್ವ ಸಮುದಾಯಕ್ಕೆ ತಿಳಿಸಲು ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷಗಳ ಸದಸ್ಯರ ಏಳು ನಿಯೋಗಗಳು ಮೇ 21ರಿಂದ ವಿವಿಧ ದೇಶಗಳಿಗೆ ಪ್ರವಾಸ ಕೈಗೊಳ್ಳಲಿವೆ. 

8 ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ 59 ಸದಸ್ಯರು ಇರುವ ಏಳು ನಿಯೋಗಗಳು ಯುರೋಪ್ ಒಕ್ಕೂಟ ಹಾಗೂ 32 ದೇಶಗಳಿಗೆ ತೆರಳಲಿವೆ.

ಜೆಡಿಯು ಸಂಸದ ಸಂಜಯ್ ಝಾ ಮತ್ತು ಶಿವಸೇನಾ (ಏಕನಾಥ ಶಿಂದೆ ಬಣ) ಸಂಸದ ಶ್ರೀಕಾಂತ ಶಿಂದೆ ನೇತೃತ್ವದ ನಿಯೋಗಗಳು ಮೇ 21ರಂದು ವಿದೇಶ ಪ್ರವಾಸ ಆರಂಭಿಸಲಿವೆ. ಸಂಜಯ್ ಝಾ ಅವರ ನಿಯೋಗವು, ಜಪಾನ್, ಇಂಡೊನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಸಿಂಗಪುರ ದೇಶಗಳಿಗೆ ತೆರಳಲಿದೆ. ಇನ್ನು ಶಿಂದೆ ನೇತೃತ್ವದ ನಿಯೋಗವು, ಯುಎಇ, ಲಿಬೇರಿಯಾ, ಕಾಂಗೊ ಮತ್ತು ಸೀರಾ ಲಿಯೊನ್ ದೇಶಗಳಿಗೆ ತೆರಳಲಿದೆ. 

ADVERTISEMENT

ಡಿಎಂಕೆ ಸಂಸದೆ ಕನಿಮೊಳಿ ನೇತೃತ್ವದ ನಿಯೋಗವು ಮೇ 22ರಂದು ರಷ್ಯಾದಿಂದ ಪ್ರವಾಸ ಆರಂಭಿಸಿ, ಜೂನ್ 7ರವರೆಗೆ ಲಟ್ವಿಯಾ, ಸ್ಲೊವೇನಿಯಾ, ಗ್ರೀಸ್ ಮತ್ತು ಸ್ಪೇನ್ ದೇಶಗಳಿಗೆ ತೆರಳಲಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಅವರ ನಿಯೋಗವು, ಮೇ 24ರಂದು ಈಜಿಪ್ಟ್‌ಗೆ ಭೇಟಿ ನೀಡಿ, ಬಳಿಕ ಇಥಿಯೊಪಿಯಾ ಮತ್ತು ದಕ್ಷಿಣ ಆಫ್ರಿಕಾದ ದೇಶಗಳ ಪ್ರತಿನಿಧಿಗಳಿಗೆ ಭಯೋತ್ಪಾದನೆ ಕುರಿತು ಭಾರತದ ನಿಲುವು ತಿಳಿಸಲಿದೆ. 

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು, ಮೇ 24ರಂದು ಪ್ರವಾಸ ಆರಂಭಿಸಿ ಅಮೆರಿಕ, ಪನಾಮಾ, ಬ್ರೆಜಿಲ್ ಮತ್ತು ಕೊಲಂಬಿಯಾ ದೇಶಗಳಿಗೆ ಭೇಟಿ ನೀಡಲಿದೆ.

ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರ ನಿಯೋಗವು, ಮೇ 24ರಂದು ಪ್ರವಾಸ ಆರಂಭಿಸಿ ಬ್ರಿಟನ್, ಜರ್ಮನಿ, ಫ್ರಾನ್ಸ್, ಯುರೋಪ್ ಒಕ್ಕೂಟ ಮತ್ತು ಡೆನ್ಮಾರ್ಕ್ ದೇಶಗಳಿಗೆ ಭೇಟಿ ನೀಡಲಿದೆ. ಇದೇ ರೀತಿ ಬೈಜಯಂತ್ ಪಾಂಡ ಅವರ ನಿಯೋಗವು ಮೇ 24ರಂದು ಸೌದಿ ಅರೇಬಿಯಾ, ಕುವೈತ್, ಬಹ್ರೇನ್ ಮೊದಲಾದ ದೇಶಗಳಿಗೆ ಭೇಟಿ ನೀಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.