ADVERTISEMENT

ಓಮೈಕ್ರಾನ್‌ ಆತಂಕ | ಚುನಾವಣಾ ರ್‍ಯಾಲಿಗಳನ್ನು ನಿಲ್ಲಿಸಿ: ಅಲಹಾಬಾದ್‌ ಹೈಕೋರ್ಟ್‌

ಪಿಟಿಐ
Published 24 ಡಿಸೆಂಬರ್ 2021, 19:37 IST
Last Updated 24 ಡಿಸೆಂಬರ್ 2021, 19:37 IST
ಅಲಹಾಬಾದ್‌ ಹೈಕೋರ್ಟ್‌
ಅಲಹಾಬಾದ್‌ ಹೈಕೋರ್ಟ್‌    

ಪ್ರಯಾಗ್‌ರಾಜ್‌: ಚುನಾವಣೆ ನಿಗದಿಯಾಗಿರುವ ರಾಜ್ಯಗಳಲ್ಲಿಕೊರೋನಾ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಹರಡುತ್ತಿರುವ ಕಾರಣ ರಾಜಕೀಯ ಸಮಾವೇಶಗಳನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಅಲಹಾಬಾದ್‌ ಹೈಕೋರ್ಟ್‌ ಒತ್ತಾಯಿಸಿದೆ.

ಮೊಕದ್ದಮೆಯೊಂದರ ವಿಚಾರಣೆ ನಡೆಸುವ ವೇಳೆ, ನ್ಯಾಯಮೂರ್ತಿ ಶೇಖರ್ ಕುಮಾರ್‌ ಯಾದವ್‌ ಅವರನ್ನು ಒಳಗೊಂಡ ಪೀಠ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ‘ದೇಶದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್‌–19ರ ಮೂರನೇ ಅಲೆಯ ಸಾಧ್ಯತೆಗಳು ಇವೆ’ ಎಂದಿದೆ.

ಎರಡನೇ ಅಲೆ ವೇಳೆ ಲಕ್ಷಾಂತರ ಜನರು ಸೋಂಕಿತರಾಗಿದ್ದರು ಮತ್ತು ಹಲವರು ಮೃತಪಟ್ಟರು. ಉತ್ತರ ಪ್ರದೇಶ ಪಂಚಾಯತಿ ಚುನಾವಣೆ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳು ಕೊರೋನಾ ಸೋಂಕು ಇನ್ನಷ್ಟು ಹರಡಲು ಕಾರಣವಾಗಿದ್ದವು.

ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ರ‍್ಯಾಲಿಗಳನ್ನು ಆಯೋಜಿಸಿ ಲಕ್ಷಾಂತರ ಜನರು ಒಂದೆಡೆ ಸೇರುವಂತೆ ಮಾಡುತ್ತಿವೆ. ಈ ರ್‍ಯಾಲಿಗಳಲ್ಲಿ ದೈಹಿಕ ಅಂತರ ಸೇರಿ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಾಧ್ಯವಿಲ್ಲ. ಹಾಗಾಗಿ, ರಾಜಕೀಯ ಸಮಾವೇಶಗಳನ್ನು ಕೂಡಲೇ ನಿಲ್ಲಿಸದಿದ್ದರೆ ಪರಿಸ್ಥಿತಿ ಎರಡನೇ ಅಲೆಗಿಂತ ಬಿಗಡಾಯಿಸಲಿದೆ.ಕೂಡಲೇ ರಾಜಕೀಯ ಸಮಾವೇಶಗಳನ್ನು ನಿಲ್ಲಿಸಿ, ರಾಜಕೀಯ ಪಕ್ಷಗಳಿಗೆ ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ನಡೆಸುವಂತೆ ಆದೇಶಿಸಬೇಕು ಎಂದು ಕೋರ್ಟ್‌ ಹೇಳಿದೆ.

ಸಾಧ್ಯವಾದರೆ, ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಬಹುದಾದ ಚುನಾವಣೆಗಳನ್ನು ಕೆಲ ತಿಂಗಳುಗಳ ಕಾಲ ಮುಂದೂಡಬಹುದು. ಸಂವಿಧಾನದ ವಿಧಿ 21ರಲ್ಲಿ ಬದುಕುವ ಹಕ್ಕು ನೀಡಲಾಗಿದೆ. ಜೀವವಿದ್ದರೆ ಮಾತ್ರ ಚುನಾವಣಾ ರ‍್ಯಾಲಿ, ಸಭೆಗಳನ್ನು ನಡೆಸಬಹುದು ಎಂದು ಚುನಾವಣಾ ಆಯೋಗಕ್ಕೆ ಕೋರ್ಟ್‌ ಹೇಳಿದೆ.

ಲಸಿಕಾ ಅಭಿಯಾನದ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಕೋರ್ಟ್‌, ರ‍್ಯಾಲಿಗಳನ್ನು ನಿಲ್ಲಿಸುವ ಮತ್ತು ಚುನಾವಣೆ ಮುಂದೂಡುವ ಕ್ರಮಗಳ ಕುರಿತು ಪ್ರಧಾನಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.