ADVERTISEMENT

ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್‌ ವಿರುದ್ಧ ‘ಇಂಡಿಯಾ’ ಒಕ್ಕೂಟದಿಂದ ಗೊತ್ತುವಳಿ?

ಪಿಟಿಐ
Published 8 ಆಗಸ್ಟ್ 2023, 11:39 IST
Last Updated 8 ಆಗಸ್ಟ್ 2023, 11:39 IST
ಜಗದೀಪ್ ಧನಕರ್‌
ಜಗದೀಪ್ ಧನಕರ್‌   

ನವದೆಹಲಿ: ವಿಪಕ್ಷಗಳೊಂದಿಗೆ ನ್ಯಾಯೋಚಿತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್ ವಿರುದ್ಧ ಗೊತ್ತುವಳಿ ಮಂಡಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಮುಂದಾಗಿವೆ.

ಈ ಬಗ್ಗೆ ಜೈರಾಮ್ ರಮೇಶ್‌, ಸುಖೇಂದು ಶೇಖರ್ ರಾಯ್‌, ತ್ರಿಚಿ ಶಿವ, ರಾಮ್‌ಗೋಪಾಲ್‌ ಯಾದವ್‌, ಎಳಮರಂ ಕರೀಮ್‌ ಹಾಗೂ ವಂದನಾ ಚವಾಣ್‌ ಅವರನ್ನೊಳಗೊಂಡ ಆರು ಮಂದಿಯ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಗೊತ್ತುವಳಿ ನಿರ್ಣಯದ ಕರಡು ಪ್ರತಿಯನ್ನು ತಯಾರಿಸಲಿವೆ ಎಂದು ಮೂಲಗಳಿಂದ ಗೊತ್ತಾಗಿದೆ.

ಸಂಸತ್‌ನಲ್ಲಿ ನಡೆದ ‘ಇಂಡಿಯಾ’ ಪಕ್ಷಗಳ ಸದನ ನಾಯಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರತಿ ಅಧಿವೇಶನಲ್ಲೂ ಧನಕರ್ ವಿರುದ್ಧ ಒಂದು ಗೊತ್ತುವಳಿ ಮಂಡಿಸಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಈ ಬಗ್ಗೆ 14 ದಿನಗಳ ಮುಂಚೆ ನೋಟಿಸ್‌ ನೀಡಬೇಕಾಗಿರುವುದರಿಂದ ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಈ ಗೊತ್ತುವಳಿ ಮಂಡಿಸುವುದು ಅನುಮಾನ.

ಅಲ್ಲದೆ ಅಗತ್ಯ ಬಿದ್ದಾಗ ಸದನದ ಬಾವಿಗೆ ಬಂದು ಪ್ರತಿಭಟನೆ ಮಾಡುವುದರ ಬಗ್ಗೆಯೂ ಚರ್ಚೆ ನಡೆಸಲಾಯಿತು. ದೆಹಲಿ ಸೇವೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸುವ ಸಲುವಾಗಿ ವಿರೋಧ ಪಕ್ಷಗಳ ನಾಯಕ ಈವರಗೆ ಬಾವಿಗೆ ಬಂದು ಪ್ರತಿಭಟನೆ ನಡೆಸಿರಲಿಲ್ಲ. ಬಾವಿಗೆ ಬಂದು ಪ್ರತಿಭಟಿಸಿದ್ದರೆ ಸದನದಿಂದ ಅಮಾನತ್ತಾಗುವ ಸಾಧ್ಯತೆ ಇತ್ತು.

‘ದೆಹಲಿ ಮಸೂದೆಗೆ ಮತ ಹಾಕುವುದಕ್ಕೂ ಮುನ್ನ ನಮ್ಮ ಸಂಸದರು ಅಮಾನತ್ತಾಗುವುದು ನಮಗೆ ಬೇಕಾಗಿರಲಿಲ್ಲ. ಈ ಹಿಂದೆ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರು ಅಮಾನತುಗೊಂಡಿದ್ದರು’ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಮಂಗಳವಾರ ತೃಣಮೂಲ ಕಾಂಗ್ರೆಸ್‌ ಸದಸ್ಯ ಡೆರೆಕ್ ಒಬ್ರಯಾನ್ ಅವರನ್ನು ಸದನ ಕಲಾಪದಿಂದ ಅಮಾನತುಗೊಳಿಸುವ ವೇಳೆ ವಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಆ ಬಳಿಕವೂ ವಿಪಕ್ಷಗಳ ಸದಸ್ಯರು ಬಾವಿಗಿಳಿದಿದ್ದು ಕಂಡುಬಂತು.

ಕಲಾಪದಲ್ಲಿ ವಿರೋಧ ಪಕ್ಷಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಹಲವು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.