ಮುಂಬೈ: ಕೃಷ್ಣಾ ನದಿಗೆ ಆಲಮಟ್ಟಿ ಬಳಿ ನಿರ್ಮಿಸಿರುವ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದ್ದು, ಇದಕ್ಕೆ ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರಿಗೆ ಪತ್ರ ಬರೆದಿದ್ದಾರೆ.
‘ಪ್ರಸ್ತುತ ಅಣೆಕಟ್ಟೆಯ ಎತ್ತರ 519.6 ಮೀ. ಇದ್ದು, ಇದನ್ನು 524.256 ಮೀ.ಗೆ ಹೆಚ್ಚಿಸಲು ಕರ್ನಾಟಕ ಮುಂದಾಗಿದೆ. ಇಂಥ ಕ್ರಮದಿಂದ ಕೃಷ್ಣಾ ನದಿ ಪಾತ್ರದ ಜನರಿಗೆ ತೊಂದರೆಯಾಗಲಿದೆ’ ಎಂದು ಫಡಣವೀಸ್ ಪತ್ರದಲ್ಲಿ ವಿವರಿಸಿದ್ದಾರೆ.
‘ಅಣೆಕಟ್ಟು ಎತ್ತರ ಹೆಚ್ಚಿಸುವ ನಿರ್ಧಾರವು ಮಹಾರಾಷ್ಟ್ರದ ಪಾಲಿಗೆ ಕಳವಳಕಾರಿ. ಕೃಷ್ಣಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಎರಡೂ ರಾಜ್ಯಗಳ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಅವರು ಕರ್ನಾಟಕ ಸರ್ಕಾರಕ್ಕೂ ಮನವಿ ಮಾಡಿದ್ದಾರೆ.
ಆ.4ರಂದು ಈ ವಿಚಾರ ಕುರಿತು ಚರ್ಚಿಸಲು ಕೇಂದ್ರ ಹಾಗೂ ರಾಜ್ಯ ಅಧಿಕಾರಿಗಳ ಸಭೆ ನಡೆಯಲಿದೆ. ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ–ಪಾಟೀಲ ಅವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ರಾಜ್ಯದ ಆತಂಕ ವ್ಯಕ್ತಪಡಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ, ಮುಖ್ಯಮಂತ್ರಿ ಫಡಣವೀಸ್ ಬರೆದಿರುವ ಈ ಪತ್ರಕ್ಕೆ ಮಹತ್ವ ಬಂದಿದೆ.
ಪತ್ರದಲ್ಲಿನ ಪ್ರಮುಖ ಅಂಶಗಳು:
* ಆಲಮಟ್ಟಿ ಅಣೆಕಟ್ಟು ನಿರ್ಮಾಣವಾದ ನಂತರ ಕೃಷ್ಣಾ ನದಿ ಹಿನ್ನೀರಿನಿಂದ ಮಹಾರಾಷ್ಟ್ರದ ಅನೇಕ ಗ್ರಾಮಗಳು ತೊಂದರೆಗೀಡಾಗಿವೆ
* ಒಂದು ವೇಳೆ ಅಣೆಕಟ್ಟೆ ಎತ್ತರ ಹೆಚ್ಚಿಸಿದಲ್ಲಿ ರಾಜ್ಯದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪದೇಪದೇ ಪ್ರವಾಹ ಪರಿಸ್ಥಿತಿ ಉಂಟಾಗಿ ಪ್ರಾಣ ಹಾಗೂ ಸ್ವತ್ತುಗಳಿಗೆ ಹಾನಿಯಾಗಲಿದೆ. ಕೃಷಿ ಭೂಮಿಯೂ ಹಾಳಾಗಲಿದೆ
* ಹೂಳು ಸಂಗ್ರಹದ ಕಾರಣ ಬ್ಯಾರೇಜುಗಳ ನೀರು ಸಂಗ್ರಹ ಸಾಮರ್ಥ್ಯ ಈಗಾಗಲೇ ಕುಸಿದಿದೆ. ಇದರಿಂದ ಪ್ರವಾಹ ಉಂಟಾದಾಗ ನೀರಿನ ಮಟ್ಟ ತಗ್ಗುವುದು ವಿಳಂಬವಾಗಿ ಮತ್ತಷ್ಟು ತೊಂದರೆಯಾಗುತ್ತಿದೆ
* ಎತ್ತರ ಹೆಚ್ಚಳ ಮಾಡುವುದರಿಂದ ಅಣೆಕಟ್ಟೆಯಲ್ಲಿ ಹೆಚ್ಚುವರಿಯಾಗಿ ನೀರು ಸಂಗ್ರಹವಾಗುತ್ತದೆ. ಇದು ಕೂಡ ಮೇಲಿಂದಮೇಲೆ ಪ್ರವಾಹ ಉಂಟಾಗಲು ಕಾರಣವಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.