ADVERTISEMENT

ಅಮರನಾಥ ಯಾತ್ರೆಯ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಣೆ

ಪಿಟಿಐ
Published 17 ಜೂನ್ 2025, 6:54 IST
Last Updated 17 ಜೂನ್ 2025, 6:54 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ: ವಾರ್ಷಿಕ ಯಾತ್ರೆಗಾಗಿ ಬಿಗಿ ಭದ್ರತಾ ಕ್ರಮಗಳ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಂಗಳವಾರ ಅಮರನಾಥ ಯಾತ್ರೆಯ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಿಸಿದೆ.

ಅಮರನಾಥ ಯಾತ್ರೆಯು ಎರಡು ಮಾರ್ಗಗಳನ್ನು ಹೊಂದಿದೆ. ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ ಮತ್ತು ಕಡಿಮೆ ಅಂತರದ ಬಾಲ್ಟಾಲ್ ಮಾರ್ಗ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಆದೇಶದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ, ಯುಎವಿಗಳು(ಮಾನವ ರಹಿತ ವೈಮಾನಿಕ ವಾಹನ ), ಡ್ರೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳನ್ನು ಹಾರಿಸುವುದನ್ನು ಜುಲೈ 1 ರಿಂದ ಆಗಸ್ಟ್ 10 ರವರೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಆದರೂ, ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ನಿರ್ವಹಣೆ ಮತ್ತು ಭದ್ರತಾ ಪಡೆಗಳ ಕಣ್ಗಾವಲು ಕಾರ್ಯಗಳಲ್ಲಿ ನಿರ್ಬಂಧಗಳು ಅನ್ವಯಿಸುವುದಿಲ್ಲ. ಅಂತಹ ವಿನಾಯಿತಿಗಳಿಗಾಗಿ ವಿವರವಾದ ಎಸ್‌ಒಪಿಯನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ.

ಜುಲೈ 3ರಿಂದ ನಿಗದಿಯಾಗಿರುವ ಅಮರನಾಥ ಯಾತ್ರೆಯನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ವಿವಿಧ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಸನ್ನಿವೇಶದ ಬಗ್ಗೆ ಸಂಬಂಧಿತ ಎಲ್ಲರ ಜೊತೆ ಚರ್ಚಿಸಲಾಗಿದೆ ಎಂದೂ ಅದು ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಸಲಹೆ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.