ADVERTISEMENT

ದೆಹಲಿ ಚಲೋ: ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟಿದ್ದ ರೈತ ಶುಭಕರಣ್‌ಗೆ ಗೌರವ

ಫೆ.21ರಂದು ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಸಾವು

ಪಿಟಿಐ
Published 31 ಮಾರ್ಚ್ 2024, 14:41 IST
Last Updated 31 ಮಾರ್ಚ್ 2024, 14:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಂಬಾಲಾ(ಹರಿಯಾಣ): ಪಂಜಾಬ್‌–ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಫೆಬ್ರುವರಿ 21ರಂದು ಪೊಲೀಸರೊಂದಿಗೆ ನಡೆದ ಘರ್ಷಣೆಯಿಂದಾಗಿ ಮೃತಪಟ್ಟ ರೈತ ಶುಭಕರಣ್‌ ಸಿಂಗ್‌ (21) ಅವರಿಗೆ ಭಾನುವಾರ ಇಲ್ಲಿ ಗೌರವ ಸಲ್ಲಿಸಲಾಯಿತು.

ಅಂಬಾಲಾ ದಂಡುಪ್ರದೇಶಕ್ಕೆ ಹೊಂದಿಕೊಂಡಿರುವ ಮೊಹ್ರಾ ಗ್ರೇನ್‌ ಮಂಡಿಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಕಿಸಾನ್‌ ಮುಕ್ತಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಂಜಾಬ್‌ ಮತ್ತು ಹರಿಯಾಣದ ನೂರಾರು ರೈತರು ಪಾಲ್ಗೊಂಡಿದ್ದರು. ಶುಭಕರಣ್‌ ಸಿಂಗ್‌ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಿದರು.

ADVERTISEMENT

ಮುಂಜಾಗ್ರತಾ ಕ್ರಮವಾಗಿ, ಕಾರ್ಯಕ್ರಮ ನಡೆದ ಸ್ಥಳ ಹಾಗೂ ಸುತ್ತಮುತ್ತ ಭಾರಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಮಂಜೀತ್‌ ಸಿಂಗ್‌ ರಾಯ್‌, ‘ರೈತರ ಹೋರಾಟದಿಂದ ಸರ್ಕಾರ ಕಂಗೆಟ್ಟಿದೆ. ಇದೇ ಕಾರಣಕ್ಕೆ ರೈತ ಹೋರಾಟಗಾರ ನವದೀಪ್‌ ಸಿಂಗ್‌ ಜಲ್ಬೇರಾ ಅವರನ್ನು ಬಂಧಿಸಲಾಗಿದೆ’ ಎಂದು ಆರೋಪಿಸಿದರು.

‘ಸರ್ಕಾರ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತದೆ. ಇದಕ್ಕೆ ಹೆದರಿ ರೈತರು ಹಿಂದಡಿ ಇಡುವುದಿಲ್ಲ, ಬದಲಾಗಿ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’ ಎಂದರು.

‘ದೆಹಲಿ ಚಲೋ‘ ಪ್ರತಿಭಟನೆ ಕುರಿತು ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿ, ಜಲ್ಬೇರಾ ಅವರನ್ನು ಅಂಬಾಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮತ್ತೊಬ್ಬ ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌,‘ಶಂಭು ಮತ್ತು ಖನೌರಿಯಲ್ಲಿ ರೈತರು ಪಂಜಾಬ್‌–ಹರಿಯಾಣ ಗಡಿಯನ್ನು ಬಂದ್‌ ಮಾಡಿರಲಿಲ್ಲ. ಹರಿಯಾಣ ಪೊಲೀಸರೇ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.