ಹೈದರಾಬಾದ್: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಬಿಗುವಿನ ವಾತಾವರಣದ ನಡುವೆಯೇ, ಭಾರಿ ಬಿಗಿ ಭದ್ರತೆಯಲ್ಲಿ 72ನೇ ವರ್ಷದ ‘ವಿಶ್ವ ಸುಂದರಿ’ ಸ್ಪರ್ಧೆಗೆ ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ಸಜ್ಜುಗೊಂಡಿದೆ.
ಇದೇ 10ರಂದು ಸ್ಪರ್ಧೆ ಆರಂಭವಾಗಲಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸುಮಾರು 110 ರಾಷ್ಟ್ರಗಳ ಸುಂದರಿಯರು ಆಗಮಿಸಿದ್ದಾರೆ. ಕಾರ್ಯಕ್ರಮದ ಆಯೋಜಕರು, ಸ್ಪರ್ಧಿಗಳಿಗಾಗಿ ರಾಜ್ಯದ ವಿವಿಧೆಡೆ ವಿವಿಧ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದ್ದಾರೆ. ಆ ಬಳಿಕ ವಿಶ್ವ ಸುಂದರಿ ‘ಕಿರೀಟ’ ಯಾರ ಮುಡಿಗೇರಲಿದೆ ಎಂಬುದು ಮೇ 31ರಂದು ಗೊತ್ತಾಗಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ರೀತಿಯ ಸನ್ನಿವೇಶದ ಕಾರಣ ಶನಿವಾರದ ಉದ್ಘಾಟನಾ ಕಾರ್ಯಕ್ರಮವು ಭಾರಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ಕಾರ್ಯಕ್ರಮಗಳು ನಿಯೋಜನೆಯಾಗಿರುವ ಸ್ಥಳಗಳು ಮತ್ತು ಸ್ಪರ್ಧಿಗಳು ಉಳಿದುಕೊಂಡಿರುವ ಹೋಟೆಲ್‌ಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮೇ 10ರಂದು ಸ್ಪರ್ಧಿಗಳು ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದರೊಂದಿಗೆ ಸ್ಪರ್ಧೆ ಅಧಿಕೃತವಾಗಿ ಆರಂಭವಾಗಲಿದೆ. ಮೇ 20ರಿಂದ 24ರವರೆಗೆ ಪ್ರತಿಭೆ ಅನಾವರಣದ ಸ್ಪರ್ಧೆ, ಫ್ಯಾಷನ್, ಕಲೆ ಮತ್ತು ಶಿಲ್ಪರಾಮಮ್‌ನಲ್ಲಿ ಕರಕುಶಲದ ಕಾರ್ಯಾಗಾರದಲ್ಲಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮೇ 26ರಂದು ಹೈಟೆಕ್ಸ್ ವೇದಿಕೆಯಲ್ಲಿ ‘ಸಂಕಲ್ಪದ ಜೊತೆ ಸೌಂದರ್ಯ’ ಸ್ಪರ್ಧೆ ನಡೆಯಲಿದೆ.
ಮೇ 31ರಂದು ಹೈಟೆಕ್ಸ್‌ನಲ್ಲಿ ಸಂಜೆ 5.30ಕ್ಕೆ ಗ್ರಾಂಡ್ ಫಿನಾಲೆ ನಿಗದಿಯಾಗಿದೆ. ವಿಶ್ವಸುಂದರಿ ಕಿರೀಟ ಯಾರ ಪಾಲಾಗಲಿದೆ ಎಂಬುದು ರಾತ್ರಿ 10.30ರ ನಂತರ ಗೊತ್ತಾಗಲಿದೆ. ಕಾರ್ಯಕ್ರಮವು ರಾತ್ರಿ 1 ಗಂಟೆವರೆಗೆ ನಡೆಯಲಿದೆ.
ವಿಶ್ವ ಸುಂದರಿ ಸ್ಪರ್ಧೆಯ 73 ವರ್ಷಗಳ ಇತಿಹಾಸದಲ್ಲಿ ಭಾರತವು ಸತತ ಎರಡನೇ ಬಾರಿಗೆ ಸ್ಪರ್ಧೆ ಆಯೋಜಿಸುವ ಅವಕಾಶ ಪಡೆದಿದೆ. 2024ರಲ್ಲಿ ನಡೆದ 71ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯು ಮುಂಬೈನಲ್ಲಿ ನಡೆದಿತ್ತು. 1966ರಲ್ಲಿ ಡಾ ರೀಟಾ ಫಾರಿಯಾ ಅವರು ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಭಾರತ ಮತ್ತು ಏಷ್ಯಾದ ಮೊದಲಿಗರೆನಿಸಿದರು. ಆಗಿನಿಂದ ವಿಶ್ವ ಸುಂದರಿ ಜೊತೆಗಿನ ಭಾರತದ ಬಾಂಧವ್ಯವು ಮುಂದುವರಿದಿದೆ. ಆ ಬಳಿಕ ರೀಟಾ ಅವರು ಮಾಡೆಲಿಂಗ್ ಅನ್ನು ಬಿಟ್ಟು ವೈದ್ಯಕೀಯ ಸೇವೆಗೆ ಮರಳಿದರು.
ಈ ಬಾರಿಯ ಸ್ಪರ್ಧೆಯಲ್ಲಿ ರಾಜಸ್ಥಾನ ಮೂಲದ ನಂದಿನಿ ಗುಪ್ತ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.