ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಕೆಎ–31 ಹೆಲಿಕಾಪ್ಟರ್ ಒಪ್ಪಂದಕ್ಕೆ ತಡೆ

ಅನಿರ್ಬನ್ ಭೌಮಿಕ್
Published 18 ಮೇ 2022, 2:56 IST
Last Updated 18 ಮೇ 2022, 2:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ನೌಕಾಪಡೆಯ ಹೊಸ ಸ್ವದೇಶಿ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ನಿಯೋಜನೆಗಾಗಿ ರಷ್ಯಾದಿಂದ ಕೆಎ-31 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಭಾರತದ ಯೋಜನೆಯ ಮೇಲೆ ರಷ್ಯಾ-ಉಕ್ರೇನ್ ಸಂಘರ್ಷದ ಕರಿ ನೆರಳು ಬಿದ್ದಿದೆ.

ರಷ್ಯಾದ ಕಾಮೊವ್ ಜೆಎಸ್‌ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ 10 ‘ಕೆಎ-31’ ವಾಯುಮಾರ್ಗದ ಮುನ್ಸೂಚನಾ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತವು ಮಾತುಕತೆ ನಡೆಸುತ್ತಿತ್ತು. ಪ್ರಸ್ತಾವಿತ 520 ಮಿಲಿಯನ್ ಡಾಲರ್ ಒಪ್ಪಂದದ ಮೇಲೆ ಈಗ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ.

ಉಕ್ರೇನ್ ವಿರುದ್ಧದ ಆಕ್ರಮಣದಿಂದಾಗಿ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ರಷ್ಯಾದಿಂದ ಖರೀದಿಸಲು ಉದ್ದೇಶಿಸಿರುವ ಹೆಲಿಕಾಪ್ಟರ್‌ಗಳಿಗೆ ಪಾವತಿಸಲು ಭಾರತಕ್ಕೆ ಕಷ್ಟಕರವಾಗಿದೆ ಎಂದು ಮೂಲವೊಂದು ತಿಳಿಸಿದೆ. ನಿರ್ಬಂಧಗಳನ್ನು ಮೀರಿ ದ್ವಿಪಕ್ಷೀಯ ವ್ಯಾಪಾರವನ್ನು ಮುಂದುವರಿಸುವ ಮಾರ್ಗಗಳ ಬಗ್ಗೆ ಉಭಯ ದೇಶಗಳು ಚರ್ಚೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ADVERTISEMENT

ಭಾರತವು ಈಗಾಗಲೇ 14 ಕೆಎ-31 ಎಇಡಬ್ಲ್ಯು ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಆದರೂ ಐಎನ್‌ಎಸ್‌ ವಿಕ್ರಾಂತ್‌ಗಾಗಿ 4 ಹೆಲಿಕಾಪ್ಟರ್‌ಗಳು ಮತ್ತು ಆರು ಭಾರತೀಯ ನೌಕಾಪಡೆಯ ಹೊಸ ಫ್ರಿಗೇಟ್‌(ಲಘು ಹಡಗು)ಗಳಲ್ಲಿ ನಿಯೋಜಿಸಲು ಹೊಸದಾಗಿ ಇನ್ನೂ 10 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತ ಬಯಸಿತ್ತು.

ಭಾರತೀಯ ನೌಕಾಪಡೆಯು ಕೆಎ-31 ಎಇಡಬ್ಲ್ಯು ಹೆಲಿಕಾಪ್ಟರ್‌ಗಳನ್ನು ತನ್ನ ಯುದ್ಧನೌಕೆಗಳಲ್ಲಿ ರಾಡಾರ್‌ಗಳಿಗೆ ಪೂರಕವಾಗಿ ಬಳಸಲು ಉದ್ದೇಶಿಸಲಾಗಿತ್ತು. ಏಕೆಂದರೆ ಈ ಹೆಲಿಕಾಪ್ಟರ್‌ಗಳ ತಿರುಗುವ ರಾಡಾರ್‌ಗಳು 200 ಕಿಮೀ ವ್ಯಾಪ್ತಿಯೊಳಗೆ ಕಡಿಮೆ ಎತ್ತರದಲ್ಲಿ ಒಳಬರುವ ಶತ್ರುಗಳ ವಾಯು ಬೆದರಿಕೆಯನ್ನು ಪತ್ತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.