ADVERTISEMENT

ಸೊಹ್ರಾಬುದ್ದೀನ್‌ ಪ್ರಕರಣದಲ್ಲಿ ಅಮಿತ್‌ ಶಾಗೆ ಲಾಭ: ಸಿಬಿಐ ಮಾಜಿ ಅಧಿಕಾರಿ ಹೇಳಿಕೆ

ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ ಅಮಿತಾಭ್ ಠಾಕೂರ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 9:23 IST
Last Updated 20 ನವೆಂಬರ್ 2018, 9:23 IST
ಅಮಿತ್ ಶಾ (ಸಂಗ್ರಹ ಚಿತ್ರ)
ಅಮಿತ್ ಶಾ (ಸಂಗ್ರಹ ಚಿತ್ರ)   

ಮುಂಬೈ:ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜಕೀಯವಾಗಿ ಮತ್ತು ಹಣಕಾಸಿನ ವಿಚಾರದಲ್ಲಿ ಲಾಭವಾಗಿದೆ ಎಂದು ಸಿಬಿಐನ ಮಾಜಿ ಅಧಿಕಾರಿ ಅಮಿತಾಭ್ ಠಾಕೂರ್ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಠಾಕೂರ್ ಅವರು ಸಿಬಿಐನಗಾಂಧಿನಗರ ಎಸ್‌ಪಿಯಾಗಿದ್ದರಲ್ಲದೆ,ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2005ರ ನವೆಂಬರ್‌ನಲ್ಲಿ ಎನ್‌ಕೌಂಟರ್ ನಡೆದಿದ್ದು, ಅಮಿತ್ ಶಾ ಆಗ ಗುಜರಾತ್‌ನ ಗೃಹ ಸಚಿವರಾಗಿದ್ದರು.

ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್‌) ಡಿಐಜಿ ಡಿ.ಜಿ. ವಂಜರಾ, ಮಾಜಿ ಎಸ್‌ಪಿ (ಉದಯಪುರ) ದಿನೇಶ್ ಎಂ.ಎನ್‌., ಅಹಮದಾಬಾದ್‌ನ ಮಾಜಿ ಎಸ್‌ಪಿ ರಾಜ್‌ಕುಮಾರ್ ಪಾಂಡಿಯನ್ ಮತ್ತು ಅಹಮದಾಬದ್‌ನ ಮಾಜಿ ಡಿಸಿಪಿ ಅಭಯ್ ಚುಡಾಸ್ಮ ಇವರಿಗೆ ಸಹ ಪ್ರಕರಣದಿಂದ ಲಾಭವಾಗಿದೆ ಎಂದು ಠಾಕೂರ್ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

ADVERTISEMENT

ಅಮಿತ್‌ ಶಾಗೆ ₹70 ಲಕ್ಷ

ಅಹಮದಾಬಾದ್‌ನ ಬಿಲ್ಡರ್‌ಗಳಾದ ಪಟೇಲ್‌ ಸಹೋದರರು ಅಮಿತ್ ಶಾ ಅವರಿಗೆ ₹70 ಲಕ್ಷ ನೀಡಿದ್ದಾರೆ. ಹಣ ನೀಡದಿದ್ದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅವರನ್ನು ಬೆದರಿಸಲಾಗಿತ್ತು. ವಂಜರಾ ಅವರಿಗೂ ಪಟೇಲ್ ಸಹೋದರರು ₹60 ಲಕ್ಷ ನೀಡಿದ್ದರು ಎಂದುಠಾಕೂರ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿರುವ ಯಾವನೇ ಪೊಲೀಸ್ ಅಧಿಕಾರಿ ಪ್ರಕರಣದಿಂದ ಏನೂ ಲಾಭ ಪಡೆದಿಲ್ಲ. ಸದ್ಯ ಆರೋಪಿ ಸ್ಥಾನದಲ್ಲಿರುವವರಿಗೆಸೊಹ್ರಾಬುದ್ದೀನ್ ಕೊಲೆ ಮಾಡಲು ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಎಲ್ಲ 20 ಆರೋಪಿಗಳು ವಂಜರಾ, ಪಾಂಡಿಯನ್, ದಿನೇಶ್, ಚುಡಾಸ್ಮ ನಿರ್ದೇಶನದಂತೆ ನಡೆಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

22 ಆರೋಪಿಗಳ ಹೆಸರನ್ನು ಪ್ರಕರಣದಲ್ಲಿ ಸೂಚಿಸುವಂತೆ ಅಂದಿನ ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಸೂಚಿಸಿದ್ದರು ಎಂಬುದನ್ನು ಠಾಕೂರ್ ಅಲ್ಲಗಳೆದಿದ್ದಾರೆ. ರಾಜಕೀಯ ಲಾಭಕ್ಕಾಗಿ 20 ಆರೋಪಿಗಳ ಹೆಸರು ಸೂಚಿಸುವಂತೆ ತಮ್ಮ ಮೇಲಧಿಕಾರಿ ಡಿಐಜಿ ಪಿ. ಕಾಂತಸ್ವಾಮಿ ಅವರಿಗೆಸಿಬಿಐ ನಿರ್ದೇಶಕರು ಸೂಚಿಸಿದ್ದರು ಎಂಬುದನ್ನೂ ಠಾಕೂರ್ ನಿರಾಕರಿಸಿದ್ದಾರೆ.

ಸೊಹ್ರಾಬುದ್ದೀನ್ ದೇಹದಲ್ಲಿ ದೊರೆತಿದ್ದ 92 ಕರೆನ್ಸಿ ನೋಟುಗಳ ಬಗ್ಗೆಯೂ ತನಿಖೆ ನಡೆಸಲಾಗಿಲ್ಲ. ಅಹಮದಾಬಾದ್‌ ಎಟಿಎಸ್‌ನ ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ ಬಾಲಕೃಷ್ಣನ್ ಚೌಧರಿ ಆರೋಪಿಯಾಗಿದ್ದರೂ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಾಕ್ಷ್ಯಗಳಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಸೊಹ್ರಾಬುದ್ದೀನ್ ದೇಹದಲ್ಲಿ 8 ಗುಂಡುಗಳು ಹೊಕ್ಕ ಗುರುತುಗಳಿದ್ದವು ಎಂಬ ಅವರ ಸಹೋದರ ರುಬಾಬುದ್ದೀನ್ ಸಾಕ್ಷ್ಯ ಹೇಳಿದ್ದನ್ನು ಠಾಕೂರ್ ತಿರಸ್ಕರಿಸಿದ್ದಾರೆ. ಸೊಹ್ರಾಬುದ್ದೀನ್ ದೇಹದಲ್ಲಿ ಕೇವಲ ಒಂದೇ ಗುಂಡು ದೊರೆತಿತ್ತು ಎಂದು ಅವರು ಹೇಳಿದ್ದಾರೆ. ಎರಡರಿಂದ ಮೂರು ಗುಂಡುಗಳು ದೇಹದ ಮೂಲಕ ಹಾದುಹೋಗಿದ್ದರೂ ಅವು ಪತ್ತೆಯಾಗಿಲ್ಲ. ಈ ಬಗ್ಗೆ, ಐದು ವರ್ಷಗಳ ನಂತರ ವಿಶೇಷ ತನಿಖಾ ತಂಡ ಇಡೀ ಪ್ರಕರಣವನ್ನು ಮರುಸೃಷ್ಟಿ ಮಾಡಿ ತನಿಖೆ ನಡೆಸಿತ್ತಾದರೂ ಮಾಹಿತಿ ದೊರೆತಿಲ್ಲ ಎಂದೂ ಅವರು ಹೇಳಿದ್ದಾರೆ.

2005ರ ಹಮೀದ್ ಲಾಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿಸೊಹ್ರಾಬುದ್ದೀನ್ ಅವರನ್ನು ಬಂಧಿಸಲು ದಿನೇಶ್ ಅವರು ಅಹಮದಾಬಾದ್‌ಗೆ ತೆರಳಿದ್ದರು.ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ಗೆ ಪ್ರತ್ಯಕ್ಷ ಸಾಕ್ಷಿ ಇಲ್ಲ ಎಂದೂ ಠಾಕೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.