ADVERTISEMENT

ಕಾಂಗ್ರೆಸ್‌ನಲ್ಲಿ ಇನ್ನೂ ಇದೆ ತುರ್ತು ಪರಿಸ್ಥಿತಿಯ ಮನಸ್ಥಿತಿ: ಶಾ

ಪಿಟಿಐ
Published 25 ಜೂನ್ 2020, 6:45 IST
Last Updated 25 ಜೂನ್ 2020, 6:45 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಗುರುವಾರ ಹರಿಹಾಯ್ದಿದ್ದಾರೆ. ‘ಒಂದು ಪಕ್ಷದ ಹಿತಾಸಕ್ತಿಯು ಪಕ್ಷ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಮೇಲುಗೈ ಸಾಧಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಗೆ 45 ವರ್ಷಗಳು ಸಂದಿದ್ದು,ಆ ಪಕ್ಷ ಇನ್ನೂ ‘ತುರ್ತು ಮನಸ್ಥಿತಿ’ಯಲ್ಲಿ ಏಕಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಉಸಿರುಗಟ್ಟಿಸುವ ವಾತಾವರಣದಿಂದ ನಲುಗಿದ್ದು, ಪಕ್ಷವು ಜನರ ಸಂಪರ್ಕ ಕಳೆದುಕೊಳ್ಳುತ್ತಿದೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

‘45 ವರ್ಷಗಳ ಹಿಂದೆ ಒಂದು ಕುಟುಂಬವು ಕೇವಲ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತು. ರಾತ್ರಿ ಬೆಳಗಾಗುವಷ್ಟರಲ್ಲಿ ಇಡೀ ದೇಶ ಬಂದೀಖಾನೆಯಾಗಿ ಬದಲಾಯಿತು. ಮಾಧ್ಯಮ ಸ್ವಾತಂತ್ರ್ಯ, ಕೋರ್ಟ್ ಅಧಿಕಾರ, ವಾಕ್‌ ಸ್ವಾತಂತ್ರ್ಯ ಮೊಟಕುಗೊಂಡವು. ಬಡವರು, ದೀನದಲಿತರ ಮೇಲೆ ದೌರ್ಜನ್ಯಗಳು ನಡೆದವು’ ಎಂದು ಶಾ ನೆನಪಿಸಿದ್ದಾರೆ.

ADVERTISEMENT

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ತುರ್ತುಪರಿಸ್ಥಿತಿ ಘೋಷಿಷಿದ್ದರು. ಅದು 1977ರ ಮಾರ್ಚ್ 21ರವರೆಗೂ ಜಾರಿಯಲ್ಲಿತ್ತು.

ಲಕ್ಷಾಂತರ ಜನರ ಹೋರಾಟದ ಫಲವಾಗಿ ತುರ್ತುಪರಿಸ್ಥಿತಿ ಹೋಗಿ, ಪ್ರಜಾಪ್ರಭುತ್ವ ಮರುಸ್ಥಾಪನೆಯಾಯಿತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆ ಮನಸ್ಥಿತಿ ಮಾತ್ರ ಹಾಗೆಯೇ ಇದೆ ಎಂದು ಶಾ ಹೇಳಿದ್ದಾರೆ.

ಇತ್ತೀಚಿನ ಸಿಡಬ್ಲ್ಯುಸಿ ಸಭೆಯಲ್ಲಿ ಹಿರಿಯ ಹಾಗೂ ಕಿರಿಯ ಮುಖಂಡರು ಕೆಲವು ವಿಷಯಗಳ ಬಗ್ಗೆ ಎತ್ತಿದ ದನಿಯನ್ನು ತಗ್ಗಿಸಲಾಯಿತು ಎಂದು ಶಾ ಆರೋಪಿಸಿದ್ದಾರೆ. ಪಕ್ಷದ ವಕ್ತಾರರನ್ನು ಕಾಂಗ್ರೆಸ್ ವಜಾಗೊಳಿಸಿತು. ಅಲ್ಲಿನ ಮುಖಂಡರು ಉಸಿರುಗಟ್ಟಿಸುವ ವಾತಾವರಣದಲ್ಲಿ ಇದ್ದಾರೆ ಎಂಬುದು ವಿಷಾದಕರ ಸಂಗತಿ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿಯ ಮನಸ್ಥಿತಿ ಇನ್ನೂ ಏಕಿದೆ. ವಂಶಾಡಳಿತಕ್ಕೆ ಸೇರದ ವ್ಯಕ್ತಿಗಳಿಗೆ ಮಾತನಾಡಲು ಏಕೆ ಅವಕಾಶ ಇಲ್ಲ. ಪಕ್ಷದ ಮುಖಂಡರು ಏಕೆ ನಿರಾಶೆಗೊಂಡಿದ್ದಾರೆ ಎಂಬ ಪ್ರಶ್ನೆಗಳನ್ನು ವಿರೋಧ ಪಕ್ಷ ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳಬೇಕಿದೆ’ ಎಂದು ಶಾ ಹೇಳಿದ್ದಾರೆ.

ಶಾ ಅವರು ಈ ಕುರಿತ ಎರಡು ಪತ್ರಿಕೆಗಳ ವರದಿಗಳನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಸಿಡಬ್ಲ್ಯುಸಿ ಸಭೆಯಲ್ಲಿ ಮಾತನಾಡಿದ್ದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಾವು ವಾಗ್ದಾಳಿ ಮುಂದುವರಿಸುವುದಾಗಿ ಹೇಳಿದ್ದರು. ಆದರೆ ಪಕ್ಷದ ಉಳಿದ ಬಹುತೇಕ ನಾಯಕರು ಮೋದಿ ಅವರನ್ನು ನೇರವಾಗಿ ಟೀಕೆ ಮಾಡುವುದನ್ನು ಕೈಬಿಟ್ಟಿದ್ದಾರೆ ಎಂದು ಟೀಕಿಸಿದ್ದರು. ‘ಚೀನಾ ಗಡಿ ಸಮಸ್ಯೆ ಕುರಿತಂತೆ ಮೋದಿ ವಿರುದ್ಧ ಟೀಕೆ ಮಾಡಬೇಕೇ ಹೊರತು ವೈಯಕ್ತಿಕವಾಗಿ ಅಲ್ಲ ಎಂದುಸಿಡಬ್ಲ್ಯುಸಿಯ ಖಾಯಂ ಆಹ್ವಾನಿತ ಆರ್‌ಪಿಎನ್ ಸಿಂಗ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದರಿಂದ ಸಿಟ್ಟಾದ ರಾಹುಲ್, ಸಿಂಗ್ ವಿರುದ್ಧ ವಾಗ್ವಾದ ನಡೆಸಿದ್ದರು’ ಎಂದು ಪತ್ರಿಕಾ ವರದಿ ಉಲ್ಲೇಖಿಸಿ ಶಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.