ADVERTISEMENT

ರಾಹುಲ್‌ ಗಾಂಧಿ ಸುಳ್ಳುಗಳ ಬಗ್ಗೆ ಜನರಿಗೆ ಅರಿವಿದೆ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 11:22 IST
Last Updated 14 ಫೆಬ್ರುವರಿ 2026, 11:22 IST
   

ಕರೈಕಲ್‌(ಪುದುಚೇರಿ): ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಎಫ್‌ಟಿಎ ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸುಳ್ಳು ಹೇಳುವ ಮೂಲಕ ರಾಹುಲ್‌ ಗಾಂಧಿ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇಲ್ಲಿ ನಡೆದ ಪಕ್ಷದ ರ್‍ಯಾಲಿಯಲ್ಲಿ ಮಾತನಾಡಿದ ಶಾ, ‘ಪ್ರತಿದಿನ ಸುಳ್ಳು ಹೇಳುವ ಹೊಸ ಸಂಪ್ರದಾಯವನ್ನು ರಾಹುಲ್‌ ಗಾಂಧಿ ಪ್ರಾರಂಭಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಸುಳ್ಳು ಹೇಳುವುದು, ಅದನ್ನೇ ಜೋರಾಗಿ ಹೇಳುವುದು, ಹೇಳಿದ ಸುಳ್ಳನ್ನೇ ಪದೇ ಪದೇ ಹೇಳುವುದು ರಾಹುಲ್‌ ಗಾಂಧಿ ಅವರ ನೀತಿಯಾಗಿದೆ. ಆದರೆ ಅವರ ಸುಳ್ಳು ತಯಾರಿಕೆ ಕಾರ್ಖಾನೆಯನ್ನು ಜನರು ಗುರುತಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

ಮುಂದುವರಿದು, ಎಫ್‌ಟಿಎ ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದಗಳಲ್ಲಿ ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಾಪಾಡಲಾಗಿದೆ ಎಂದು ಹೇಳಿದ ಅವರು, ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಆಡಳಿತದಲ್ಲಿ ರೈತರ ಹಿತಾಸಕ್ತಿಗಳನ್ನು ಮಾರಾಟ ಮಾಡಲಾಗಿತ್ತು ಎಂದು ದೂರಿದ್ದಾರೆ.

2029ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.