ಜೋದ್‌ಪುರ: ಅಂಗವಿಕಲರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯ ಇದೆ. ರಾಷ್ಟ್ರ ನಿರ್ಮಾಣದಲ್ಲೂ ಕೊಡುಗೆ ನೀಡುತ್ತಿರುವ ಈ ಸಮುದಾಯದ ಹೊಣೆ ಸಮಾಜದ ಜವಾಬ್ದಾರಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪಾರಸ್‌ಮಲ್ ಬೊಹ್ರಾ ಅಂಧರ ಮಹಾ ವಿದ್ಯಾಲಯದ ಮೂರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಂಗವಿಕಲರು ತಮ್ಮ ಜೀವನದಲ್ಲಿ ಬೆಳೆದು ನಿಲ್ಲುವಂತೆ ಮಾಡುವುದು ಸಮಾಜದ ಜವಾಬ್ದಾರಿ ಎನ್ನುವುದನ್ನು ನಾವು ಖಚಿತಪಡಿಸಬೇಕಿದೆ ಎಂದರು.
‘ವಿವಿಧ ಕ್ಷೇತ್ರಗಳ ಸಣ್ಣ–ಸಣ್ಣ ಪ್ರಯತ್ನಗಳೂ ದೊಡ್ಡ ಮಟ್ಟದ ಬದಲಾವಣೆ ತರಬಲ್ಲವು. ನಾವು ಅಂಗವಿಕಲರಿಗೆ ಉತ್ತಮ ಬದುಕು ಮತ್ತು ಭವಿಷ್ಯ ಕಲ್ಪಿಸಲು ಸಾಧ್ಯವಿದೆ. 2015ರಲ್ಲಿ ‘ವಿಕಲಾಂಗ’ ಎಂಬುದನ್ನು ‘ವಿಕಲಚೇತನ’ ಎಂದು ಬದಲಿಸಿ, ಈ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಅಮಿತ್ ಶಾ ಹೇಳಿದರು.
ಎರಡು ಬಾರಿ ಪ್ಯಾರಾಲಿಂಪಿಕ್ ಜಾವಲಿನ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ರಾಜಸ್ಥಾನದ ದೇವೇಂದ್ರ ಝಝಾರಿಯಾ ಜೊತೆ ನಡೆಸಿದ ಭೇಟಿ ಸ್ಮರಿಸಿದ ಅಮಿತ್ ಶಾ, ‘ಸಮಾಜ, ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ’ ಎಂದರು.
1960ರಿಂದ 2013ರವರೆಗೆ ಭಾರತ ಪ್ಯಾರಾಲಿಂಪಿಕ್‌ನಲ್ಲಿ ಕಡಿಮೆ ಪದಕಗಳನ್ನು ಗೆದ್ದಿತ್ತು. ಕಳೆದ ಮೂರು ಕ್ರೀಡಾಕೂಟಗಳಲ್ಲಿ 52 ಪದಕಗಳನ್ನು ಬಾಚಿಕೊಂಡಿದೆ. 2014ರಲ್ಲಿ ಅಂಗವಿಕಲರ ಸಬಲೀಕರಣ ಇಲಾಖೆಯ ಬಜೆಟ್ ಮೊತ್ತ ₹ 338 ಕೋಟಿ ಇತ್ತು. ಅದನ್ನು ₹ 1,313 ಕೋಟಿಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.