ADVERTISEMENT

ಗಾಂಧಿನಗರದಲ್ಲಿ ಅಮಿತ್‌ ಶಾ ಶಕ್ತಿ ಪ್ರದರ್ಶನ

ಅಡ್ವಾಣಿ ಪ್ರತಿನಿಧಿಸಿದ್ದ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಧ್ಯಕ್ಷ: ಹಿರಿಯ ನಾಯಕರ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 10:43 IST
Last Updated 11 ಮೇ 2019, 10:43 IST
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಗಾಂಧಿನಗರದಲ್ಲಿ ರೋಡ್‌ ಶೋ ನಡೆಸಿದರು. ರಾಜನಾಥ್‌ ಸಿಂಗ್‌, ವಿಜಯ್‌ ರೂಪಾಣಿ ಹಾಗೂ ಇತರ ನಾಯಕರು ಜೊತೆಗಿದ್ದರು ಪಿಟಿಐ ಚಿತ್ರ
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಗಾಂಧಿನಗರದಲ್ಲಿ ರೋಡ್‌ ಶೋ ನಡೆಸಿದರು. ರಾಜನಾಥ್‌ ಸಿಂಗ್‌, ವಿಜಯ್‌ ರೂಪಾಣಿ ಹಾಗೂ ಇತರ ನಾಯಕರು ಜೊತೆಗಿದ್ದರು ಪಿಟಿಐ ಚಿತ್ರ   

ಅಹಮದಾಬಾದ್‌: ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು ರೋಡ್‌ಶೋ ಮತ್ತು ಸಮಾವೇಶವನ್ನೂ ಅವರು ನಡೆಸಿದರು. ಕೇಂದ್ರದ ಸಚಿವರಾದ ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಈ ಸಂದರ್ಭದಲ್ಲಿ ಶಾ ಅವರ ಜೊತೆಗಿದ್ದರು.

ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅರುಣ್‌ ಜೇಟ್ಲಿ, ‘ಅಡ್ವಾಣಿ, ವಾಜಪೇಯಿಯಂಥ ಹಿರಿಯ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರವಿದು. ಈ ಕ್ಷೇತ್ರ ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡು ಪಕ್ಷದ ಅಧ್ಯಕ್ಷರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿಯ ನಾಯಕರು ನಿರ್ಧರಿಸಿದರು. ದಾಖಲೆ ಮತಗಳಿಂದ ಶಾ ಇಲ್ಲಿ ಗೆಲುವು ಸಾಧಿಸಲಿದ್ದಾರೆ. ಅಷ್ಟೇ ಅಲ್ಲ, ಗುಜರಾತ್‌ನ 26 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲ್ಲುವರು. ಮೋದಿ ಪುನಃ ಪ್ರಧಾನಿಯಾಗುವುದು ಖಚಿತ’ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಾರಾಯಣಪುರದಲ್ಲಿ ಆಯೋಜಿಸಿದ್ದ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ರಾಷ್ಟ್ರವನ್ನು ಯಾರು ಮುನ್ನಡೆಸಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಹಿಮಾಚಲಪ್ರದೇಶದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಂನಿಂದ ಗಾಂಧಿನಗರದವರೆಗೆ ಯಾರಲ್ಲಿ ಈ ಪ್ರಶ್ನೆ ಕೇಳಿದರೂ, ಮೋದಿ... ಮೋದಿ... ಎಂದು ಘೋಷಣೆ ಕೂಗುತ್ತಾರೆ’ ಎಂದರು.

ADVERTISEMENT

1980ರ ದಶಕದಲ್ಲಿ ಬಿಜೆಪಿಯಲ್ಲಿ ವಾರ್ಡ್‌ ಮಟ್ಟದ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ ದಿನಗಳಿಂದ ಈವರೆಗಿನ ಹೋರಾಟವನ್ನು ಸ್ಮರಿಸಿಕೊಂಡ ಶಾ, ‘ನನ್ನೊಳಗಿನಿಂದ ಬಿಜೆಪಿಯನ್ನು ತೆಗೆದರೆ ನಾನು ಶೂನ್ಯವಾಗುತ್ತೇನೆ. ಈಗ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನರೇಂದ್ರ ಮೋದಿ ನೇತೃತ್ವದಲ್ಲಿ ಈ ದೇಶ ಸುರಕ್ಷಿತವಾಗಿರುತ್ತದೆ. ಆದ್ದರಿಂದ ರಾಜ್ಯದ ಎಲ್ಲ 26 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು’ ಎಂದು ಮನವಿ ಮಾಡಿಕೊಂಡರು.

ಕೆಂದ್ರದ ದಚಿವರಾದ ರಾಜನಾಥ್‌ ಸಿಂಗ್‌ ಮತ್ತು ನಿತಿನ್‌ ಗಡ್ಕರಿ, ಎನ್‌ಡಿಎ ಮಿತ್ರಪಕ್ಷಗಳ ಪ್ರತಿನಿಧಿಗಳಾದ ಉದ್ಧವ್‌ ಠಾಕ್ರೆ, ಪ್ರಕಾಶ್‌ ಸಿಂಗ್‌ ಬಾದಲ್ ಹಾಗೂ ರಾಮ್‌ ವಿಲಾಸ್‌ ಪಾಸ್ವಾನ್‌ ವೇದಿಕೆಯಲ್ಲಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಶಾ ಗಾಂಧಿನಗರದಲ್ಲಿ ರೋಡ್‌ ಶೋ ನಡೆಸಿದರು. ಮೂರು ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿರುವ ಗಾಂಧಿನಗರ ಕ್ಷೇತ್ರದಿಂದ ಇದೇ ಮೊದಲಬಾರಿಗೆ ಶಾ ಕಣಕ್ಕೆ ಇಳಿದಿದ್ದಾರೆ.

ದಾಳಿಯ ಶ್ರೇಯ ಮೋದಿಗೆ ಸಲ್ಲಬಾರದೇಕೆ?: ರಾಜನಾಥ್‌

‘ಪಾಕಿಸ್ತಾನವನ್ನು ಇಬ್ಭಾಗವಾಗಿಸಿದ ಶ್ರೇಯಸ್ಸನ್ನು ಇಂದಿರಾ ಗಾಂಧಿ ಅವರಿಗೆ ನೀಡಬಹುದಾಗಿದ್ದರೆ, ಬಾಲಾಕೋಟ್‌ ಮೇಲೆ ವಾಯು ದಾಳಿ ನಡೆಸಿದ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅವರಿಗೆ ಯಾಕೆ ನೀಡಬಾರದು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಪ್ರಶ್ನಿಸಿದ್ದಾರೆ.

ಅಮಿತ್‌ ಶಾ ಅವರು ಸ್ಪರ್ಧಿಸಲಿರುವ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ‘1971ರಲ್ಲಿ ನಮ್ಮ ಯೋಧರ ಸಾಹಸದಿಂದಾಗಿ ಪಾಕಿಸ್ತಾನ ವಿಭಜನೆಗೊಂಡು, ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂತು. ಆ ಯುದ್ಧದ ಬಳಿಕ ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲೇ ಇಂದಿರಾ ಗಾಂಧಿ ಅವರನ್ನು ಹೊಗಳಿದ್ದರು. ಅಷ್ಟೇ ಅಲ್ಲ ಇಡೀ ರಾಷ್ಟ್ರ ಇಂದಿರಾ ಅವರನ್ನು ಹೊಗಳುತ್ತಿತ್ತು’ ಎಂದರು.

‘ಪುಲ್ವಾಮಾ ಘಟನೆಯಲ್ಲಿ ನಮ್ಮ 40 ಯೋಧರು ಹುತಾತ್ಮರಾದ ಬಳಿಕ ಮೋದಿ ಅವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. 1971ರ ಯುದ್ಧದ ಶ್ರೇಯಸ್ಸನ್ನು ಇಂದಿರಾ ಗಾಂಧಿಗೆ ನೀಡಬಹುದಾಗಿದ್ದರೆ, ಬಾಲಾಕೋಟ್‌ ದಾಳಿಯ ಶ್ರೇಯಸ್ಸನ್ನು ಯಾಕೆ ಮೋದಿಗೆ ಕೊಡಬಾರದು’ ಎಂದು ರಾಜನಾಥ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.