ತೆಲಂಗಾಣದ ನಿಜಾಮಾಬಾದ್‌ನಲ್ಲಿ ಅರಿಸಿನ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು
ಪಿಟಿಐ ಚಿತ್ರ
ಹೈದರಾಬಾದ್: ನಕ್ಸಲರೊಂದಿಗೆ ಕೇಂದ್ರ ಸರ್ಕಾರ ಯಾವುದೇ ಮಾತುಕತೆಗೂ ಸಿದ್ಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ತಿಳಿಸಿದರು.
ತೆಲಂಗಾಣದ ನಿಜಾಮಾಬಾದ್‌ನಲ್ಲಿ ಅರಿಸಿನ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಚೇರಿ ಉದ್ಘಾಟಿಸಿದ ನಂತರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಕ್ಸಲರೊಂದಿಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಕೇಳುತ್ತಿದೆ. ಆದರೆ ನಮ್ಮ ಸರ್ಕಾರವು ಶಸ್ತ್ರಾಸ್ತ್ರಗಳನ್ನು ಹಿಡಿದವರೊಂದಿಗೆ ಮಾತನಾಡುವುದಿಲ್ಲ’ ಎಂದು ಹೇಳಿದರು.
‘ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರ ಮುಂದೆ ಶರಣಾಗಬೇಕು. ನಂತರ ಮುಖ್ಯವಾಹಿನಿಗೆ ಸೇರಬೇಕು’ ಎಂದು ಅವರು ತಿಳಿಸಿದರು.
ಈಶಾನ್ಯ ಭಾರತದಲ್ಲಿ 10 ಸಾವಿರ ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದು, ತಾಲ್ಲೂಕು ಮಟ್ಟದಿಂದ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದಾರೆ ಎಂದರು.
‘ಕಳೆದ ಒಂದೂವರೆ ವರ್ಷದಲ್ಲಿ ಎರಡು ಸಾವಿರಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲದಿದ್ದರೆ 2026ರ ಮಾರ್ಚ್ 31ರೊಳಗೆ ನಕ್ಸಲ್‌ವಾದ ಹಾಗೂ ಹೋರಾಟಕ್ಕೆ ಇತಿಶ್ರೀ ಹಾಡಲಾಗುವುದು’ ಎಂದು ಶಾ ಹೇಳಿದರು.
‘ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಇನ್ನೂ ಪ್ರಶ್ನೆಗಳನ್ನು ಎತ್ತುತ್ತಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕಾರ್ಯಾಚರಣೆಯ ಪರಿಣಾಮವನ್ನು ಅರ್ಥೈಸಿಕೊಳ್ಳಲು ಪಾಕಿಸ್ತಾನದ ದುರ್ಬಲ ಸ್ಥಿತಿಯತ್ತ ಒಮ್ಮೆ ನೋಡಬೇಕು’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.