ADVERTISEMENT

ಅಮಿತ್ ಶಾ ಮಾತ್ರವಲ್ಲ ಬೇರಾವ ಶಾಗೂ ತಮಿಳುನಾಡನ್ನು ನಿಯಂತ್ರಿಸಲಾಗದು: CM ಸ್ಟಾಲಿನ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 11:06 IST
Last Updated 19 ಏಪ್ರಿಲ್ 2025, 11:06 IST
<div class="paragraphs"><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ&nbsp;ಕೇಂದ್ರ ಗೃಹ ಸಚಿವ ಅಮಿತ್‌ ಶಾ</p></div>

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ

   

ಚೆನ್ನೈ: ತಮಿಳುನಾಡು ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆ ಸಲುವಾಗಿ ವಿರೋಧ ಪಕ್ಷ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಾತನಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಕಿಡಿಕಾರಿರುವ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಜಯ ಸಾಧಿಸಿ ಪುನಃ ಅಧಿಕಾರಕ್ಕೆ ಬರಲಿದ್ದು, ತಮಿಳುನಾಡು 'ದೆಹಲಿಯ ನಿಯಂತ್ರಣಕ್ಕೆ ಒಳಪಡುವುದಿಲ್ಲ' ಎಂದು ವಿಶ್ವಾಸದಿಂದ ಹೇಳಿದ್ದಾರೆ.

ADVERTISEMENT

ಸರ್ಕಾರಿ ಕಾರ್ಯಕ್ರಮದಲ್ಲಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಸ್ಟಾಲಿನ್‌, 'ಬಿಜೆಪಿಯ ರಾಜಕೀಯ ತಂತ್ರಗಾರ ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವುದಾಗಿ, ಹಿಂದಿ ಹೇರುವುದಿಲ್ಲ ಎಂಬುದಾಗಿ ಭರವಸೆ ನೀಡಲಿ ಹಾಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಣೆ ಕುರಿತು ಸ್ಪಷ್ಟನೆ ನೀಡಲಿ' ಎಂದು ಸವಾಲು ಹಾಕಿದ್ದಾರೆ.

ರಾಜ್ಯದ ಹಕ್ಕುಗಳನ್ನು ಕೇಳುವುದೇ ತಪ್ಪೇ ಎಂದು ಪ್ರಶ್ನಿಸಿರುವ ಸ್ಟಾಲಿನ್‌, 'ಮಿತಿ ಮೀರಿ ವರ್ತಿಸುತ್ತಿರುವ ರಾಜ್ಯಪಾಲ ಆರ್‌.ಎನ್‌. ರವಿ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ವಿಫಲವಾಗಿರುವ ಕಾರಣ, 'ಐತಿಹಾಸಿಕ ತೀರ್ಪಿಗಾಗಿ' ತಮಿಳುನಾಡು ಬಲವಂತವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ' ಎಂದಿದ್ದಾರೆ.

'ತಮಿಳುನಾಡು ತನ್ನಗಾಗಿ ಮಾತ್ರವೇ ಹೋರಾಟ ಮಾಡುತ್ತಿಲ್ಲ. ದೇಶದ ಎಲ್ಲ ರಾಜ್ಯಗಳ ಪರವಾಗಿ ಹೋರಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಡಿಎಂಕೆಯು ತಮಿಳುನಾಡಿನ ಜನರಿಗಾಗಿ ಮಾತ್ರವಲ್ಲ. ದೇಶದ ಪ್ರತಿಯೊಬ್ಬರಿಗಾಗಿ ಎಂಬುದು ಸ್ಪಷ್ಟವಾಗಿದೆ. ಅದೇ ನಮ್ಮ ಪಕ್ಷದ ನಿಜವಾದ ಸಾಮರ್ಥ್ಯ' ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗಾಗಿ ಎಐಎಡಿಎಂಕೆ ಹಾಗೂ ಬಿಜೆಪಿ ಕಳೆದವಾರ ಮೈತ್ರಿ ಮಾಡಿಕೊಂಡಿರುವುದನ್ನು 'ಹಗರಣ' ಎಂದಿರುವ ಸ್ಟಾಲಿನ್‌, 'ತನ್ನ ನಾಯಕರ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ದಾಳಿ ನಡೆಸಬಹುದು ಎಂಬ ಭಯದಲ್ಲಿ ಎಐಎಡಿಎಂಕೆಯು ರಾಜ್ಯದ ಹಕ್ಕುಗಳನ್ನು ಅಡಮಾನವಿಟ್ಟಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಾನು ಸ್ಪಷ್ಟವಾಗಿ ಹೇಳುತ್ತೇನೆ; ಅದು ಅಮಿತ್‌ ಶಾ ಆಗಿರಲಿ ಅಥವಾ ಇನ್ಯಾವುದೇ ಶಾ ಇರಲಿ. ಯಾರೂ ಇಲ್ಲಿ ಆಡಳಿತ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ.

ಎಐಎಡಿಎಂಕೆ – ಬಿಜೆಪಿ ಮೈತ್ರಿ ಸಲುವಾಗಿ ಶಾ ಇತ್ತೀಚೆಗೆ ತಮಿಳುನಾಡಿಗೆ ಬಂದಿದ್ದರು.

'2026ರಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ' ಎಂದು ಶಾ ಅವರು ಸಂಸತ್ತಿನಲ್ಲಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿ, 'ಪಕ್ಷಗಳನ್ನು ಒಡೆಯುವುದು, ತನಿಖಾ ಸಂಸ್ಥೆಗಳ ದಾಳಿ ಮೂಲಕ ರಾಜಕಾರಣಿಗಳನ್ನು ಬೆದರಿಸುವ ಬಿಜೆಪಿಯ ಯೋಜನೆ ತಮಿಳುನಾಡಿನಲ್ಲಿ ಕೈಗೂಡುವುದಿಲ್ಲ' ಎಂದು ತಿರುಗೇಟು ನೀಡಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್‌–ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.