ADVERTISEMENT

ಅಮಿತ್ ಶಾ ಹೆಲಿಕಾಪ್ಟರ್‌ ಇಳಿಯಲು ಅನುಮತಿ ನಿರಾಕರಿಸಿದ ಮಮತಾ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 11:24 IST
Last Updated 21 ಜನವರಿ 2019, 11:24 IST
ಅಮಿತ್ ಶಾ
ಅಮಿತ್ ಶಾ    

ಕೋಲ್ಕತ್ತ: ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್‌ಗೆ ಮಾಲ್ಡಾದಲ್ಲಿ ಇಳಿಯಲು ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ನಿರಾಕರಿಸಿದೆಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ಹೋಟೆಲ್ ಗ್ರೌಂಡ್ ಪಾರ್ಕ್ ಎದುರು ಇರುವ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಸಬಹುದು ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.

ಹೆಲಿಕಾಪ್ಟರ್ ಇಳಿಸಲು ಅನುಮತಿ ಕೋರಿ ಜನವರಿ 18ರಂದು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದಜಿಲ್ಲಾ ಮೆಜಿಸ್ಟ್ರೇಟ್, ಮಾಲ್ಡಾ ವಿಮಾನ ನಿಲ್ದಾಣ ಸುಧಾರಣೆಗಾಗಿ ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗಲಾರದು.ಹಾಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ ಬಿಜೆಪಿ, ಪ್ರತಿ ಬುಧವಾರ ಸರ್ಕಾರದ ಹೆಲಿಕಾಪ್ಟರ್‌ಗಳು ಮಾಲ್ಡಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿವೆ.ಅಮಿತ್ ಶಾ ಅವರ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲು ಸಮಸ್ಯೆ ಇದೆ ಎಂದು ನೀವು ಹೇಳುತ್ತೀರಿ.ಹೀಗಿರುವಾಗ ಬಂಗಾಳ ಸರ್ಕಾರದ ಹೆಲಿಕಾಪ್ಟರ್ ಇಳಿಯಲು ನೀವು ಅವಕಾಶ ನೀಡುತ್ತಿರುವುದೇಕೆ ಎಂದು ಕೇಳಿದೆ.

ಕೆಲವು ದಿನಗಳ ಹಿಂದೆಯಷ್ಟೇ ಅದೇ ಹೆಲಿಪ್ಯಾಡ್‍ನಲ್ಲಿ ಮಮತಾ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು. ಕೆಲವು ಪತ್ರಕರ್ತರೂ ಅಲ್ಲಿಗೆ ಹೋಗಿದ್ದರು.ಅಲ್ಲಿರುವ ಹೆಲಿಪ್ಯಾಡ್ ಎಷ್ಟು ಸ್ವಚ್ಛವಾಗಿದೆ ಎಂಬುದರ ಬಗ್ಗೆ ನನ್ನಲ್ಲಿ ಫೋಟೊಗಳಿವೆ.ಇಂತಿರುವಾಗ ಶಾ ಅವರಿಗೆ ಅನುಮತಿ ನಿರಾಕರಿಸುವ ಮೂಲಕ ಅಧಿಕಾರದ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಅನುಮತಿ ನೀಡಿದರೂ ಅಲ್ಲಿ ಸುರಕ್ಷಾ ಸಮಸ್ಯೆಗಳಿವೆ.ಬೇರೆ ಕಡೆ ಹೆಲಿಕಾಪ್ಟರ್ ಇಳಿಸುವಂತೆ ಪೊಲೀಸರು ಹೇಳಿದ್ದಾರೆ. ಪೊಲೀಸರ ಮನವಿಪ್ರಕಾರ ನಾನು ಕೂಡಾ ಬೇರೆ ಜಾಗದಲ್ಲಿ ಹೆಲಿಕಾಪ್ಟರ್ ಇಳಿಸುತ್ತಿದ್ದೇನೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ ಕಾರಣಸಭೆಗೆ ಅನುಮತಿ ನೀಡಿದ್ದೇವೆ.ಬಿಜೆಪಿ ಮಾಹಿತಿಯನ್ನು ತಿರುಚಿ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.