ADVERTISEMENT

ತಮಿಳುನಾಡು ವಿಧಾನಸಭೆ ಚುನಾವಣೆಗೆ ಎಐಎಡಿಎಂಕೆ–ಎಎಂಎಂಕೆ ನಡುವೆ ಮೈತ್ರಿ?

ಚೆನ್ನೈ ನಿವಾಸ ತಲುಪಿದ ವಿ.ಕೆ. ಶಶಿಕಲಾ

ಪಿಟಿಐ
Published 9 ಫೆಬ್ರುವರಿ 2021, 16:19 IST
Last Updated 9 ಫೆಬ್ರುವರಿ 2021, 16:19 IST
ಎಎಂಎಂಕೆ ಪಕ್ಷದ ಬಾವುಟ ಪ್ರದರ್ಶಿಸುತ್ತಿರುವ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್‌
ಎಎಂಎಂಕೆ ಪಕ್ಷದ ಬಾವುಟ ಪ್ರದರ್ಶಿಸುತ್ತಿರುವ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್‌   

ಚೆನ್ನೈ : ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಹೊರಟಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ ರಸ್ತೆ ಮಾರ್ಗವಾಗಿ 23 ತಾಸು ಪ್ರಯಾಣ ಮಾಡಿ, ಇಲ್ಲಿನ ಟಿ. ನಗರದ ತಮ್ಮ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ತಲುಪಿದರು. ಅದರ ಜತೆಗೇ ಎಐಎಡಿಎಂಕೆ–ಎಎಂಎಂಕೆ ನಡುವೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಹೇಳಿಕೆಗಳು ಕೇಳಿಬಂದಿವೆ.

ಸೋಮವಾರ ಬೆಂಗಳೂರಿನಿಂದ ತಾಯ್ನಾಡಿನತ್ತ ಪ್ರಯಾಣ ಆರಂಭಿಸಿದ ಶಶಿಕಲಾ ಅವರಿಗೆ ತಮಿಳುನಾಡು ಗಡಿ ಜಿಲ್ಲೆ ಕೃಷ್ಣಗಿರಿ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಚೆನ್ನೈಗೆ ಬರುವ ಮಾರ್ಗದುದ್ದಕ್ಕೂ ಅವರಿಗೆ ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿತು.

‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಮತ್ತು ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಾ ಹಿಡಿತಕ್ಕೆ ಪಡೆಯುವುದು ಶಶಿಕಲಾ ಅವರ ಉದ್ದೇಶ. ಈ ಚುನಾವಣೆಯಲ್ಲಿ ಅವರು ಕಣಕ್ಕೂ ಇಳಿಯಲಿದ್ದಾರೆ’ ಎಂದು ಶಶಿಕಲಾ ಅವರ ಅಣ್ಣನ ಮಗ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಎಂಕೆ) ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ತಿಳಿಸಿದ್ದಾರೆ.

ADVERTISEMENT

ರಜನಿಕಾಂತ್‌ ಭೇಟಿ

ಖ್ಯಾತ ನಟ ರಜನಿಕಾಂತ್‌ ಅವರು ಸೋಮವಾರ ಶಶಿಕಲಾ ಅವರ ಆರೋಗ್ಯ ವಿಚಾರಿಸಿದರು. ಶಶಿಕಲಾ ಅವರು ಮನೆ ತಲುಪುವುದಕ್ಕೂ ಮೊದಲು ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರ ರಾಮಪುರಮ್‌ನ ಮನೆಗೆ ಭೇಟಿ ನೀಡಿ, ಎಂಜಿಆರ್‌ ಭಾವಚಿತ್ರ ಮತ್ತು ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ, ನಮನ ಸಲ್ಲಿಸಿದರು.


ಕಾನೂನು ಮೊರೆ

ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎಎಂಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸಲಿವೆಯೇ ಎಂಬ ಪ್ರಶ್ನೆಗೆ, ಅಮ್ಮನ ಕೈಗೆ ಅಧಿಕಾರ ನೀಡಲು ಮತ್ತುಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಃ ಅವರಿಗೆ ಒಪ್ಪಿಸುವ ಸಲುವಾಗಿಯೇ ನಾನು 2018ರಲ್ಲಿ ಎಎಂಎಂಕೆ ಪಕ್ಷ ಸ್ಥಾಪಿಸಿದ್ದೇನೆ ಎಂದು ದಿನಕರನ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಎಐಎಡಿಎಂಕೆ ಮತ್ತು ಎಎಂಎಂಕೆ ಹೊಂದಾಣಿಕೆಯಲ್ಲಿ ಬಿಜೆಪಿಯ ಪಾತ್ರವಿದೆಯೇ ಎನ್ನುವ ಪ್ರಶ್ನೆಗೆ ದಿನಕರನ್‌ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಆಗದು. ಆದರೆ, ಕಾನೂನಿನಲ್ಲಿ ಇದಕ್ಕೆ ಅವಕಾಶಗಳು ಇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದಿದ್ದಾರೆ.

‘ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಯಲಲಿತಾ ಸಾವಿನ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿರುವುದು ನಿಜವಾದ ಕಾಳಜಿಯಿಂದಲ್ಲ. ಶಶಿಕಲಾ ಅವರ ಮೇಲೆ ಡಿಎಂಕೆ ಆಧಾರ ರಹಿತ ಆರೋಪ ಮಾಡುತ್ತಿದೆ’ ಎಂದು ದಿನಕರನ್‌ ಹರಿಹಾಯ್ದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.