ADVERTISEMENT

ಅಂಫಾನ್ ಚಂಡಮಾರುತ: ಸಿದ್ಧತೆ ಪರಾಮರ್ಶಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಧಾನಿ ಪ್ರಾರ್ಥನೆ

ಏಜೆನ್ಸೀಸ್
Published 18 ಮೇ 2020, 14:39 IST
Last Updated 18 ಮೇ 2020, 14:39 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಅಂಫಾನ್’ ಚಂಡಮಾರುತ ಎದುರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಸಿದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪರಾಮರ್ಶಿಸಿದ್ದಾರೆ. ಈ ವಿಚಾರವಾಗಿ ಅವರು ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜತೆ ಸೋಮವಾರ ಸಭೆ ನಡೆಸಿದ್ದಾರೆ.

ಚಂಡಮಾರುತವು ತೀವ್ರ ಸ್ವರೂಪ ಪಡೆದಿದ್ದು ಮೇ 20ರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶವನ್ನು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

‘ಅಂಫಾನ್ ಎದುರಸುವ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಸಿದ್ಧತೆಯನ್ನು ಪರಿಶೀಲಿಸಿದೆ. ತುರ್ತು ಪ್ರತಿಕ್ರಿಯೆ ಮತ್ತು ಸ್ಥಳಾಂತರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಚಂಡಮಾರುತವು ಬುಧವಾರ ಅಪ್ಪಳಿಸುವ ಸಾಧ್ಯತೆ ಇದ್ದು, ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ, ‘ದಕ್ಷಿಣ ಮತ್ತು ಉತ್ತರ 24 ಪರಗಣ’, ಹೌರಾ, ಹೂಗ್ಲಿ ಮತ್ತು ಕೋಲ್ಕತ್ತದಲ್ಲಿ ಹೆಚ್ಚಿನ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

ಎನ್‌ಡಿಆರ್‌ಎಫ್‌ನ 25 ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಇನ್ನೂ 12 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ಪ್ರಧಾನ ನಿರ್ದೇಶಕರು ಸಭೆಯ ವೇಳೆ ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಎನ್‌ಡಿಆರ್‌ಎಫ್‌ನ 24 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಪ್ರಧಾನಿಯವರ ಮುಖ್ಯ ಸಲಹೆಗಾರ ಪಿ.ಕೆ.ಸಿನ್ಹಾ, ಸಚಿವ ಸಂಪುಟ ಕಾರ್ಯದರ್ಶಿ ರಾಜೀವ್ ಗುಬ್ಬಾ ಸಹ ಪರಾಮರ್ಶೆ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.