ADVERTISEMENT

ಅಮೃತಪಾಲ್‌ ಸಿಂಗ್‌ ಪತ್ತೆಗೆ ಮುಂದುವರಿದ ತೀವ್ರ ಶೋಧ

ಪಿಟಿಐ
Published 29 ಮಾರ್ಚ್ 2023, 12:39 IST
Last Updated 29 ಮಾರ್ಚ್ 2023, 12:39 IST
ಅಮೃತಪಾಲ್‌ ಸಿಂಗ್
ಅಮೃತಪಾಲ್‌ ಸಿಂಗ್   

ಹೊಶಿಯಾರ್‌ ಪುರ, ಪಂಜಾಬ್ (ಪಿಟಿಐ): ಸಿಖ್‌ ಮೂಲಭೂತವಾದಿ ಪ್ರಚಾರಕ ಅಮೃತಪಾಲ್‌ ಸಿಂಗ್ ಮತ್ತು ಸಹಚರರು ಅಡಗಿರುವ ಶಂಕೆಯಡಿ ಪೊಲೀಸರು ಇಲ್ಲಿನ ಮರ್ನಾಯನ್ ಗ್ರಾಮದಲ್ಲಿ ತೀವ್ರ ತಪಾಸಣೆ ನಡೆಸಿದರು.

ಪೊಲೀಸರು ಬೆನ್ನಟ್ಟಿದ್ದ ಹಿಂದೆಯೇ ಶಂಕಿತರು ಎನ್ನಲಾದವರು ಮಂಗಳವಾರ ರಾತ್ರಿ ಗ್ರಾಮದ ಬಳಿ ವಾಹನ ಬಿಟ್ಟು ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದ ಪ್ರತಿ ಮನೆಯಲ್ಲಿಯೂ ತಪಾಸಣೆ ನಡೆಸಿದರು.

ಪಂಜಾಬ್‌ ಪೊಲೀಸ್‌ನ ಗುಪ್ತದಳ ವಿಭಾಗದ ಪೊಲೀಸರು, ಅಮೃತಪಾಲ್‌ ಸಿಂಗ್‌ ಸಹಚರರು ಇದ್ದ ಶಂಕೆಯ ಮೇಲೆ ಫಗ್ವಾರಾ ಗ್ರಾಮದಿಂದ ಕಾರೊಂದನ್ನು ಬೆನ್ನಟ್ಟಿದ್ದರು. ಕಾರಿನಲ್ಲಿ ಮೂರರಿಂದ ನಾಲ್ಕು ಜನರಿದ್ದರು ಎನ್ನಲಾಗಿದ್ದು, ಮರ್ನಾಯನ್‌ ಗ್ರಾಮದ ಗುರುದ್ವಾರ ಭಾಯ್‌ ಚಂಚಲ್‌ ಸಿಂಗ್‌ ಬಳಿ ಕಾರು ಬಿಟ್ಟು ಕಾಲ್ಕಿತ್ತಿದ್ದರು.

ADVERTISEMENT

ಅಮೃತಪಾಲ್‌ ಸಿಂಗ್ ಪತ್ತೆಗೆ ಪೊಲೀಸರು ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಆತನ ನೇತೃತ್ವದ ವಾರಿಸ್‌ ಪಂಜಾಬ್‌ ದೇ ಸಂಘಟನೆಯ ಮೇಲೆ ಮಾರ್ಚ್‌ 18ರಂದು ನಡೆದ ದಾಳಿ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.

ಸಿಖ್ಖರು ಧರಿಸುವ ರುಮಾಲು ಇಲ್ಲದೆ, ಮಾಸ್ಕ್ ಧರಿಸಿದ್ದ ಅಮೃತಪಾಲ್‌ ಸಿಂಗ್ ತನ್ನ ಸಹಚರ ಪಪಲ್‌ಪ್ರೀತ್‌ ಸಿಂಗ್‌ ಜೊತೆಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಕಾಣಿಸಿಕೊಂಡಿತ್ತು.

ಈ ವಿಡಿಯೊ ಕುರಿತಂತೆ ಪೊಲೀಸರು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ವಿಡಿಯೊದಲ್ಲಿ ಇರುವುದು ಅಮೃತಪಾಲ್‌ ಸಿಂಗ್‌ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.