ADVERTISEMENT

ಎಎಂಯು: 14 ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲು

ಸಂಸದ ಓವೈಸಿ ಕಾರ್ಯಕ್ರಮಕ್ಕೆ ವಿರೋಧ

ಪಿಟಿಐ
Published 13 ಫೆಬ್ರುವರಿ 2019, 18:43 IST
Last Updated 13 ಫೆಬ್ರುವರಿ 2019, 18:43 IST
   

ಅಲಿಗಡ: ಪಾಕಿಸ್ತಾನ ಪರ ಘೋಷಣೆ ಕೂಗಿದ ಹಾಗೂ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಇಲ್ಲಿನ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) 14 ಜನ ವಿದ್ಯಾರ್ಥಿಗಳ ವಿರುದ್ಧ ಬುಧವಾರ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಲಾಗಿದೆ.

ಎಎಂಯು ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ವಿಶ್ವವಿದ್ಯಾಲಯದ ಫೈಜ್‌ ಗೇಟ್‌ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು.

ಇನ್ನೊಂದೆಡೆ, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರು ಸಹ ಇದೇ ಕಾರಣಕ್ಕೆ ಪ್ರತಿಭಟಿಸಿ, ಸಂಸದ ಓವೈಸಿ ಅವರು ವಿ.ವಿ.ಆವರಣ ಪ್ರವೇಶಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಿದರು.

ADVERTISEMENT

‘ಈ ಪ್ರತಿಭಟನೆ ವೇಳೆ ವಿ.ವಿ.ಯ ಕೆಲವು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿ, ನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ದೂರಿ ಬಿವೈಜೆಎಂ ಮುಖಂಡ ಮುಕೇಶ್‌ ಲೋಧಿ ದೂರು ಸಲ್ಲಿಸಿದ್ದರು.

ಅದೇ ರೀತಿ, ವಿ.ವಿ. ವಿದ್ಯಾರ್ಥಿಗಳು ಸಹ ಪ್ರತಿಭಟಿಸಿ, ಘಟನೆಗೆ ಸಂಬಂಧಿಸಿದಂತೆ ವಿ.ವಿ.ಯ ಕಾನೂನು ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ಬಿಜೆಪಿ ಶಾಸಕ ದಲ್ವೀರ್‌ ಸಿಂಗ್‌ ಅವರ ಮೊಮ್ಮಗ ಅಜಯ್‌ ಸಿಂಗ್‌ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.