ಬೆಂಗಳೂರು: ಅಮೂಲ್ ಸಂಸ್ಥೆಯು ದೇಶದಾದ್ಯಂತ ಹಾಲಿನ ದರದಲ್ಲಿ ₹1 ಕಡಿತ ಮಾಡಿದೆ.
ಅಮೂಲ್ ಗೋಲ್ಡ್, ಅಮೂಲ್ ತಾಜಾ ಮತ್ತು ಅಮೂಲ್ ಟೀ ಸ್ಪೆಷಲ್ 1 ಲೀಟರ್ ಹಾಲಿನ ಪ್ಯಾಕೆಟ್ ಬೆಲೆಯಲ್ಲಿ ₹1 ಕಡಿತ ಮಾಡಿದೆ. ಈ ದರ ಕಡಿತವು 1 ಲೀಟರ್ ಹಾಲಿನ ಪ್ಯಾಕೆಟ್‌ಗೆ ಮಾತ್ರ ಅನ್ವಯವಾಗಲಿದೆ ಎಂದು ಗುಜರಾತ್ ಹಾಲು ಮಾರಾಟ ಸಹಕಾರ ಒಕ್ಕೂಟದ(ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ತಿಳಿಸಿದ್ದಾರೆ.
ದರ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಅಮೂಲ್ ಗೋಲ್ಡ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹66ರಿಂದ ₹65ಕ್ಕೆ, ಅಮೂಲ್ ಟೀ ಸ್ಪೆಷಲ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹62ರಿಂದ ₹61ಕ್ಕೆ ಮತ್ತು ಅಮೂಲ್ ತಾಜಾ ಹಾಲಿನ ದರ ಲೀಟರ್‌ಗೆ ₹54 ನಿಂದ ₹53ಕ್ಕೆ ಇಳಿಕೆಯಾಗಿದೆ.
ಈ ಹಿಂದೆ, 2024ರ ಜೂನ್ ತಿಂಗಳಲ್ಲಿ ಅಮೂಲ್ ಹಾಲಿನ ಬೆಲೆಯಲ್ಲಿ ಲೀಟರ್‌ಗೆ ₹2 ಹೆಚ್ಚಿಸಲಾಗಿತ್ತು.
‘ಒಕ್ಕೂಟದ ಈ ನಿರ್ಧಾರವು ದೊಡ್ಡ ಪ್ಯಾಕೆಟ್‌ಗಳ ಹಾಲು ಖರೀದಿಸುವಂತೆ ಗ್ರಾಹಕರಿಗೆ ಉತ್ತೇಜನ ನೀಡಲಿದೆ. ದೇಶದಾದ್ಯಂತ ಪರಿಷ್ಕೃತ ದರ ಅನ್ವಯವಾಗಲಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಶುಕ್ರವಾರ ತಿಳಿಸಿದ್ದಾರೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿದಿನ ಮೂರು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತದೆ. 2023–24ರಲ್ಲಿ ₹59,445 ಕೋಟಿ ವಹಿವಾಟು ನಡೆಸಿದೆ. ವಿಶ್ವದ ಅತಿದೊಡ್ಡ 20 ಹೈನುಗಾರಿಕೆ ಕಂಪನಿಗಳ ಪೈಕಿ ಜಿಸಿಎಂಎಂಎಫ್ 8ನೇ ಸ್ಥಾನ ಪಡೆದಿದೆ. 30ಕ್ಕೂ ಹೆಚ್ಚು ದೇಶಗಳಲ್ಲಿ ಅಮೂಲ್ ಉತ್ಪನ್ನಗಳು ಮಾರಾಟವಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.