ADVERTISEMENT

₹65,000 ಕೋಟಿ ಮೊತ್ತದ ಅಮರಾವತಿ ಯೋಜನೆಗೆ ಆಂಧ್ರ ಚಾಲನೆ

ಪಿಟಿಐ
Published 13 ಏಪ್ರಿಲ್ 2025, 9:41 IST
Last Updated 13 ಏಪ್ರಿಲ್ 2025, 9:41 IST
<div class="paragraphs"><p>ಅಮರಾವತಿ </p></div>

ಅಮರಾವತಿ

   

ವಿಜಯವಾಡ: ₹65,000 ಕೋಟಿ ಮೊತ್ತದ ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿಯ ನಿರ್ಮಾಣ ಯೋಜನೆಯನ್ನು ಪುನರಾರಂಭಿಸಲಾಗಿದೆ.

ಕೃಷ್ಣಾ ನದಿಯ ತಟದಲ್ಲಿ ವಿಶ್ವದಾದ್ಯಂತದ ಕೌಶಲ್ಯ ಹೊಂದಿರುವ ವಲಸಿಗರು, ಕೈಗಾರಿಕೆಗಳು, ವೃತ್ತಿಪರರು ಮತ್ತು ಉದ್ಯಮಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಭವ್ಯ ನಗರ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ADVERTISEMENT

2019ರಿಂದ 2024ರವರೆಗೆ ನೆನೆಗುದಿಗೆ ಬಿದ್ದಿದ್ದ ಅಮರಾವತಿ ಯೋಜನೆಯನ್ನು ಸಿಎಂ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಏರುತ್ತಿದ್ದಂತೆ ಪುನರಾರಂಭಿಸಿದ್ದಾರೆ.

ಆಮ್‌ಸ್ಟರ್‌ಡಮ್, ಸಿಂಗಪುರ, ಟೊಕಿಯೊ ಸೇರಿದಂತೆ ಜಾಗತಿಕ ಪ್ರಮುಖ ನಗರಗಳಿಂದ ಸ್ಫೂರ್ತಿ ಪಡೆದು ವಿಶ್ವದರ್ಜೆಯ ನಗರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗಿದೆ. ಇದೊಂದು ಭವ್ಯ ನಗರ ಮಾತ್ರವಲ್ಲದೆ, ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಆಧುನಿಕ ಸ್ಪರ್ಶ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಅಭೂತಪೂರ್ವ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಆಹ್ವಾನ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

2014ರಲ್ಲಿ ಆಂಧ್ರಪ್ರದೇಶದ ವಿಭಜನೆಯ ನಂತರ ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ಗೊತ್ತುಪಡಿಸಲಾಯಿತು. ಬ್ರಿಟನ್ ಮೂಲದ ಪ್ರಸಿದ್ಧ ಸಂಸ್ಥೆ ಫೋಸ್ಟರ್ ಅಂಡ್ ಪಾರ್ಟ್‌ನರ್ಸ್ ರಚಿಸಿದ ಅಮರಾವತಿ ಮಾಸ್ಟರ್ ಪ್ಲಾನ್‌ನಲ್ಲಿ ವಿಜಯವಾಡ ಮತ್ತು ಗುಂಟೂರು ಪಟ್ಟಣಗಳ ನಡುವೆ 217.23 ಚದರ ಕಿ.ಮೀ ಸಮಗ್ರ ಅಭಿವೃದ್ಧಿಗೆ ಯೋಜಿಸಲಾಗಿತ್ತು.

ಕೃಷ್ಣಾ ನದಿಯ ದಡದಲ್ಲಿರುವ ಈ ನಗರವು ಪ್ರಮುಖ ಆರ್ಥಿಕ ಕೇಂದ್ರವಾಗುವ ನಿರೀಕ್ಷೆಯಿದೆ. 2050ರ ವೇಳೆಗೆ 1.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ, 3.5 ಮಿಲಿಯನ್ ಜನಸಂಖ್ಯೆಗೆ ನೆಲೆಯಾಗಲಿದೆ ಮತ್ತು 35 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಮರಾವತಿಯ ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು ಬಜೆಟ್ ಸುಮಾರು ₹64,910 ಕೋಟಿ ಗಳಾಗಿದ್ದು, ಯೋಜನೆಯ ಹಂತ-1 ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಗೆ ಕೇಂದ್ರವು ₹15,000 ಕೋಟಿ ನೀಡುವ ಭರವಸೆ ನೀಡಿದ್ದು, ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳಿಂದ ತಲಾ 800 ಮಿಲಿಯನ್ ಡಾಲರ್ ಸಾಲಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.