
ಬಸ್ ಅಪಘಾತದ ದೃಶ್ಯ
ಚಿತ್ರಕೃಪೆ: X/@India_Ranger
ಚಿಂತೂರು/ಆಂಧ್ರಪ್ರದೇಶ: ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಚಿಂತೂರು–ಮಾರೇಡುಮಿಲ್ಲಿ ಘಾಟಿಯಲ್ಲಿ ಶುಕ್ರವಾರ ಬೆಳಗಿನ ಜಾವ 4.30ರ ಸುಮಾರಿಗೆ ಬಸ್ ಕಣಿವೆಗೆ ಉರುಳಿ 9 ಪ್ರಯಾಣಿಕರು ಮೃತಪಟ್ಟು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್ ತೆಲಂಗಾಣದಿಂದ ಚಿಂತೂರಿಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ದಟ್ಟವಾದ ಮಂಜು ಆವರಿಸಿದ್ದರಿಂದ ತಿರುವಿನಲ್ಲಿ ಚಾಲಕನಿಗೆ ರಸ್ತೆ ಕಾಣಿಸದೆ ಕಂದಕಕ್ಕೆ ಉರುಳಿದೆ.
ಚಾಲಕ, ನಿರ್ವಾಹಕ ಸೇರಿ ಒಟ್ಟು 37 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರು, ಗಾಯಾಳುಗಳನ್ನು ಹೊರತುಪಡಿಸಿ ಆರು ಮಂದಿ ಸುರಕ್ಷಿತರಾಗಿದ್ದಾರೆ ಎಂದು ಎಸ್‌ಪಿ ಅಮಿತ್ ಬರ್ದಾರ್ ಸುದ್ದಿಗಾರರಿಗೆ ತಿಳಿಸಿದರು.
ಚಿಂತೂರು–ಮಾರೇಡುಮಿಲ್ಲಿ ಘಾಟಿಯ ದುರ್ಗಾ ದೇವಸ್ಥಾನದ ಸಮೀಪದ ತಿರುವಿನಲ್ಲಿ ಬಸ್ ಆಳವಾದ ಕಣಿವೆಗೆ ಉರುಳಿದ್ದು ಮಧ್ಯದಲ್ಲಿ ಸಿಲುಕಿಕೊಂಡಿದೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್‌ಪಿ ಹೇಳಿದರು.
ಪ್ರಯಾಣಿಕರಲ್ಲಿ ಹೆಚ್ಚಿನವರು ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀರಾಮ ಕ್ಷೇತ್ರ ದರ್ಶನಕ್ಕಾಗಿ ಹೊರಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.