ADVERTISEMENT

ಕರ್ನೂಲ್ ಬಸ್‌ ದುರಂತ: ಪ್ರಯಾಣಿಕರ ದ್ವಾರದಿಂದ ಹಾರಿ ಪಾರಾಗಿದ್ದ ಚಾಲಕ

ಪಿಟಿಐ
Published 25 ಅಕ್ಟೋಬರ್ 2025, 10:23 IST
Last Updated 25 ಅಕ್ಟೋಬರ್ 2025, 10:23 IST
   

ಕರ್ನೂಲ್‌: ಬೆಂಕಿ ಹೊತ್ತಿಕೊಂಡ ಬಸ್ಸಿನ ಪರಿಸ್ಥಿತಿ ಅರಿಯುವಲ್ಲಿ ವಿಫಲನಾದ ಬಸ್ಸಿನ ಚಾಲಕ ಪ್ರಯಾಣಿಕರ ಬಾಗಿಲಿನಿಂದ ಹೊರಗೆ ಹಾರಿ ಪಾರಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

ಚಾಲಕ ಮಿರಿಯಾಲ ಲಕ್ಷ್ಮಯ್ಯ (42) ಮತ್ತು ಇಬ್ಬರು ಹೆಚ್ಚುವರಿ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಶುಕ್ರವಾರವೇ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನೂಲ್‌ನ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ಪಾಟೀಲ್‌ ಹೇಳಿದರು.

ಬಸ್ಸಿನಿಂದ ಹೊರಗೆ ಹಾರಿದ ಚಾಲಕ ಲಕ್ಷ್ಮಯ್ಯ ಬಸ್ಸಿನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳ ನಡುವಿನ ಲಗೇಜ್‌ ರ್‍ಯಾಕ್‌ನಲ್ಲಿ ಮಲಗಿದ್ದ ಹೆಚ್ಚುವರಿ ಚಾಲಕರನ್ನು ಎಬ್ಬಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.  ಬೆಂಕಿಯಿಂದ ಉರಿಯುತ್ತಿದ್ದ ಬಸ್ಸಿನೊಳಗೆ ಹೋಗಲು ಸಾಧ್ಯವಿಲ್ಲ ಎಂದು ಅರಿತ ಬಳಿಕ ಅವರು ಟೈರ್‌ ಬದಲಿಸಲು ಬಳಸುವ ರಾಡ್‌ಗಳಿಂದ ಕೆಲ ಕಿಟಕಿಗಾಜುಗಳನ್ನು ಒಡೆದಿದ್ದಾರೆ. ಇದರಿಂದಾಗಿ ಕೆಲ ಪ್ರಯಾಣಿಕರು ಬಸ್ಸಿನಿಂದ ಹೊರ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪಾಟೀಲ್‌ ವಿವರಿಸಿದರು.

ADVERTISEMENT

ಬೆಂಕಿಯ ಕೆನ್ನಾಲಗೆ ವ್ಯಾಪಕವಾಗಿ ಇಡೀ ಬಸ್‌ ಅನ್ನು ಆವರಿಸಿದಾಗ ಭೀತಿಗೊಂಡ ಚಾಲಕ ಲಕ್ಷ್ಮಯ್ಯ ಸ್ಥಳದಿಂದ ಓಡಿಹೋಗಿದ್ದಾರೆ. ಅವರನ್ನು ಕರ್ನೂಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆಯಲಾಗಿದ್ದು ದುರಂತಕ್ಕೆ ತಪ್ಪಿತಸ್ಥ ಎಂದು ಪರಿಗಣಿಸಲಾಗಿದೆ ಎಂದರು.

ಲಕ್ಷ್ಮಯ್ಯನ ವಿರುದ್ಧ ನಿರ್ಲಕ್ಷ್ಯ ಅತಿ ವೇಗದ ಚಾಲನೆ ಆರೋಪ ಹೊರಿಸಲಾಗಿದೆ. ಬಿಎನ್‌ಎಸ್‌ ಕಾಯ್ದೆಯ ಸೆಕ್ಷನ್‌ 125 (ಎ) (ಮಾನವ ಜೀವಕ್ಕೆ ಅಪಾಯ) ಮತ್ತು 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.