ಹೈದರಾಬಾದ್: ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತಾವಧಿಯಲ್ಲಿನ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ವು ಹಗರಣದಲ್ಲಿ ದೊಡ್ಡ ಮೊತ್ತ ವಿನಿಮಯವಾಗಿದ್ದು, ಇದರಲ್ಲಿ ಹಾಲಿ ಲೋಕಸಭೆ ಸದಸ್ಯ, ವೈಎಸ್‌ಆರ್‌ಸಿಪಿಯ ಮಾಜಿ ರಾಜ್ಯಸಭೆ ಸದಸ್ಯ ಭಾಗಿಯಾಗಿದ್ದರು ಎಂದು ಆರೋಪಿಸಿದೆ.
ಈ ಹಗರಣದ ತನಿಖೆಗಾಗಿ ತೆಲುಗು ದೇಶಂ ಪಕ್ಷ ನೇತೃತ್ವದ ಹಾಲಿ ಎನ್‌ಡಿಎ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು. ಹಣದ ವಹಿವಾಟು ಬಹುತೇಕ 2019 ಮತ್ತು 2024ರ ಅವಧಿಯಲ್ಲಿ ನಡೆದಿದ್ದು, ಆಗ ಮದ್ಯ ಮಾರಾಟ ಮಳಿಗೆಗಳಲ್ಲಿ ಡಿಜಿಟಲ್ ಪಾವತಿಗೆ ನಿರ್ಬಂಧ ಇತ್ತು. ಹಣದ ಮೂಲಕವಷ್ಟೇ ವಹಿವಾಟು ನಡೆಯುತ್ತಿತ್ತು ಎಂದು ಹೇಳಿದೆ.
ಎಸ್‌ಐಟಿ ಈ ಸಂಬಂಧ ಮಧ್ಯ ಉತ್ಪಾದಕರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ. ಹಗರಣದ ಮೊತ್ತವು ಅಂದಾಜು ₹4,000 ಕೋಟಿ ಇರಬಹುದು ಎನ್ನಲಾಗಿದೆ. ದೊಡ್ಡ ಮೊತ್ತದ ಅವ್ಯವಹಾರ ಆಗಿರುವ ಕಾರಣ ಜಾರಿ ನಿರ್ದೇಶನಾಲಯ (ಇ.ಡಿ) ಕೂಡ ತನಿಖೆ ನಡೆಸುವ ಸಾಧ್ಯತೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
‘ಹೆಚ್ಚಿನ ಮದ್ಯ ಉತ್ಪಾದಕರ ಪ್ರಕಾರ, ಮದ್ಯದ ಪ್ರತಿ ಕೇಸ್‌ಗೆ ₹150 ರಿಂದ ₹200 ಸುಲಿಗೆ ಮಾಡಲಾಗಿದೆ. ಈ ಲೆಕ್ಕದಲ್ಲಿ ಮಾಸಿಕ ₹80 ಕೋಟಿವರೆಗೂ ವಸೂಲಿ ಮಾಡಲಾಗಿದೆ’ ಎಂದು ಉತ್ಪಾದಕರು ತಿಳಿಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಅಬಕಾರಿ ಹಗರಣ ಆರೋಪದ ತನಿಖೆಗೆ ಎಸ್‌ಐಟಿ ರಚನೆಯಾದ ಹಿಂದೆಯೇ, ಸಿಐಡಿ ಕೂಡ ಈ ಸಂಬಂಧ ತನಿಖೆಯನ್ನು ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.