ಚಂದ್ರಬಾಬು ನಾಯ್ಡು
– ಪಿಟಿಐ
ಅಮರಾವತಿ: ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರನ್ನು (ಎಸ್‌ಸಿ) ಮೂರು ಉಪ ವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ನೀಡಲು ಆಂಧ್ರ ಪ್ರದೇಶ ಸರ್ಕಾರವು ಗುರುವಾರ ಸುಗ್ರೀವಾಜ್ಞೆ ಹೊರಡಿಸಿದೆ.
‘ಆಂಧ್ರ ಪ್ರದೇಶ ಪರಿಶಿಷ್ಟ ಜಾತಿ (ಉಪ-ವರ್ಗೀಕರಣ) ಸುಗ್ರೀವಾಜ್ಞೆ-2025 ಅನ್ನು ರಾಜ್ಯದ ಗೆಜೆಟ್‌ನಲ್ಲಿ ಇಂಗ್ಲಿಷ್, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಆಂಧ್ರಪ್ರದೇಶ ಸುಗ್ರೀವಾಜ್ಞೆ 2025ರ ನಂ. 2 ಎಂದು ಪ್ರಕಟಿಸಲಾಗಿದೆ’ ಎಂದು ಕಾನೂನು ಇಲಾಖೆಯ ಆದೇಶದಲ್ಲಿ ತಿಳಿಸಿದೆ.
ಏಪ್ರಿಲ್ 15ರಂದು ಪರಿಶಿಷ್ಟ ಜಾತಿಗಳನ್ನು ಒಟ್ಟು ಶೇ 15ರಷ್ಟು ಮೀಸಲಾತಿಗೆ ಒಳಪಟ್ಟಂತೆಯೇ ಮೂರು ಗುಂಪುಗಳಾಗಿ ಉಪ ವರ್ಗೀಕರಣ ಮಾಡುವ ಸುಗ್ರೀವಾಜ್ಞೆಯ ಪ್ರಸ್ತಾಪವನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಚಿವ ಸಂಪುಟವು ಅನುಮೋದಿಸಿತ್ತು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 59 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಚಂಡಾಲ, ಪಾಕಿ, ರೆಲ್ಲಿ, ಡೋಮ್ ಹಾಗೂ ಇನ್ನಿತರ ಜಾತಿಗಳಂತಹ 12 ಜಾತಿಗಳು ವರ್ಗ–1ರಲ್ಲಿದ್ದು, ಇವುಗಳಿಗೆ ಶೇ 1ರಷ್ಟು ಒಳಮೀಸಲಾತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಈ ಹಿಂದೆ ಹೇಳಿತ್ತು.
ವರ್ಗ-2ರಲ್ಲಿ ಚಮಾರ್, ಮಾದಿಗ, ಸಿಂಧೋಲಾ, ಮಾತಂಗಿ ಮತ್ತು ಇತರ ಜಾತಿಗಳು ಸೇರಿವೆ. ಇವರಿಗೆ ಶೇ 6.5 ಮೀಸಲಾತಿ ಕಲ್ಪಿಸಲಾಗಿದೆ. ವರ್ಗ–3ರಲ್ಲಿ ಮಾಲಾ ಮತ್ತು ಅದರ ಉಪ-ಜಾತಿಗಳು, ಆದಿ ಆಂಧ್ರ, ಪಂಚಮಾ ಮತ್ತು ಇತರ ಜಾತಿಗಳವರು ಸೇರಿದ್ದಾರೆ. ಇವರಿಗೆ ಶೇ 7.5 ಮೀಸಲಾತಿ ನೀಡಲಾಗಿದೆ.
‘ಈ ಸುಗ್ರೀವಾಜ್ಞೆಯೊಂದಿಗೆ, ಆಂಧ್ರ ಪ್ರದೇಶದ ಎಲ್ಲ ಪರಿಶಿಷ್ಟ ಜಾತಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ನ್ಯಾಯ ಪಡೆಯಲಿವೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಕಳೆದ ವರ್ಷ ತನ್ನ ತೀರ್ಪಿನಲ್ಲಿ, ಮೀಸಲಾದ ವರ್ಗಗಳಲ್ಲಿ ಒಳ ಮೀಸಲಾತಿ ನೀಡಲು ಎಸ್‌ಸಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.