
ಆಂಧ್ರದ ಶ್ರೀಕಾಕುಳಂನ ವೆಂಕಟೇಶ್ವರ ಖಾಸಗಿ ದೇವಸ್ಥಾನದಲ್ಲಿ ಕಾಲ್ತುಳಿತ
ಕಾಶಿಬುಗ್ಗ(ಶ್ರೀಕಾಕುಳಂ): ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 10 ಜನ ಮೃತಪಟ್ಟಿದ್ದಾರೆ. ಈ ಕುರಿತು ಆಂಧ್ರದ ಟಿವಿ ವಾಹಿನಿಗಳು ವರದಿ ಮಾಡಿವೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆ 11.30ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು 10 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ‘ಶ್ರೀಕಾಕುಲಂ ಜಿಲ್ಲೆಯ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತವು ನನಗೆ ನೋವುಂಟು ಮಾಡಿದೆ. ಅಹಿತಕರ ಘಟನೆಯಲ್ಲಿ ಭಕ್ತಾಧಿಗಳು ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ’ ಎಂದಿದ್ದಾರೆ.
ಎನ್. ಚಂದ್ರಬಾಬು ನಾಯ್ಡು ಅವರು ಕಾಲ್ತುಳಿತದಲ್ಲಿ ಗಾಯಗೊಂಡಿರುವವರಿಗೆ ಉತ್ತಮ ಚಿಕಿತ್ಸೆ ಒದಗಿಸುವ ಭರವಸೆ ನೀಡಿದ್ದು, ಘಟನಾ ಸ್ಥಳದ ಮೇಲ್ವಿಚಾರಣೆಗೆ ಅಧಿಕಾರಿಗಳು ಹಾಗೂ ಸ್ದಳೀಯ ನಾಯಕರಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.