ADVERTISEMENT

ತಿರುಪತಿಯಲ್ಲಿ ಅವಮಾನ... ಜನರಿಗಾಗಿ ಈ ದೇಗುಲ ನಿರ್ಮಾಣ: ಅಲ್ಲೇ ಈಗ ಕಾಲ್ತುಳಿತ

ಎಲ್ಲರಿಗೂ ಸುಲಭವಾಗಿ ದರ್ಶನ ಸಿಗುವಂತಾಗಲಿ ಎಂಬ ಉದ್ದೇಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 16:17 IST
Last Updated 1 ನವೆಂಬರ್ 2025, 16:17 IST
   

ಹೈದರಾಬಾದ್‌: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ಭವ್ಯವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು  94 ವರ್ಷದ ಹರಿಮುಕುಂದ ಪಾಂಡಾ ನಿರ್ಮಿಸಿದ್ದಾರೆ. ಶನಿವಾರ ಇಲ್ಲಿ ನಡೆದ ಕಾಲ್ತುಳಿತದಲ್ಲಿ 10 ಜನರು ಮೃತಪಟ್ಟಿದ್ದಾರೆ.

ಪ್ರತಿಯೊಬ್ಬರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಪಾಂಡಾ ನಿರ್ಮಿಸಿರುವ ಈ ದೇವಸ್ಥಾನ, ಈಗ ಕಾಲ್ತುಳಿತ ಘಟನೆಯಿಂದಾಗಿ ಅವರ ಆಶಯವನ್ನೇ ಬುಡಮೇಲು ಮಾಡಿದಂತಾಗಿದೆ.

ಈ ದೇವಸ್ಥಾನ ನಿರ್ಮಿಸಲು ಕಾರಣವಾದ ಸಂಗತಿಯೂ ಆಸಕ್ತಿದಾಯಕ. ದಶಕದ ಹಿಂದೆ ತಿರುಪತಿಗೆ ಹೋಗಿದ್ದ ಹರಿಮುಕುಂದ ಪಾಂಡಾ ಅವರಿಗೆ ವೆಂಕಟೇಶ್ವರ ದೇವರ ದರ್ಶನ ಸಮರ್ಪಕವಾಗಿ ಸಿಗಲಿಲ್ಲ. ಈ ಕಹಿ ಅನುಭವ ಅವರನ್ನು ಬಹುವಾಗಿ ಕಾಡಿತು.

ADVERTISEMENT

ಎಲ್ಲರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು. ತಿರುಪತಿಯಲ್ಲಿರುವ ದೇವಸ್ಥಾನವನ್ನೇ ಹೋಲುವಂತಹ ದೇಗುಲವನ್ನು ನಿರ್ಮಿಸಬೇಕು ಎಂದು ನಿಶ್ಚಯಿಸಿದ ಅವರು, ಅದರನ್ನೂ ಕಾರ್ಯಗತಗೊಳಿಸಿದರು.

ತಮ್ಮ ಒಡೆತನದ 50 ಎಕರೆ ಎಸ್ಟೇಟ್‌ ಪೈಕಿ, 10 ಎಕರೆ 40 ಸೆಂಟ್ ಜಾಗದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಿಸಿದ್ದಾರೆ. ಅಂದಾಜು ₹2 ಕೋಟಿ ವೆಚ್ಚ ಮಾಡಿ, 6 ವರ್ಷಗಳಲ್ಲಿ ಇದನ್ನು ನಿರ್ಮಿಸಲಾಗಿದೆ.

ಕೆಲ ಕಾಮಗಾರಿಗಳು ಬಾಕಿ ಇರುವಾಗಲೇ, ನಾಲ್ಕು ತಿಂಗಳ ಹಿಂದೆ ಅವರು ಈ ದೇವಸ್ಥಾನವನ್ನು ಉದ್ಘಾಟಿಸಿದ್ದರು. ಮೂಲ ಮೂರ್ತಿಯ ಎತ್ತರ 9 ಅಡಿ 9 ಇಂಚು ಇದ್ದು, ಪ್ರತ್ಯೇಕವಾಗಿ ಶ್ರೀದೇವಿ ಮತ್ತು ಭೂದೇವಿಯರ ಗರ್ಭಗುಡಿಗಳನ್ನು ಸಹ ನಿರ್ಮಿಸಲಾಗಿದೆ. ಇವೆಲ್ಲವೂ ತಿರುಪತಿಯಲ್ಲಿನ ದೇವತಾಮೂರ್ತಿಗಳ ಪ್ರತಿರೂಪವಾಗಿವೆ.

‘ನಾನು ಚಿಕ್ಕಂದಿನಿಂದಲೂ ತಿರುಪತಿಗೆ ಹೋಗುತ್ತಿದ್ದೆ. ದೇವರ ಮೂರ್ತಿ ಮುಂದೆ ಹೆಚ್ಚುಹೊತ್ತು ನಿಂತು ದರ್ಶನ ಪಡೆಯುತ್ತಿದ್ದೆ. ಇದಕ್ಕೆ ಕೆಲ ಅರ್ಚಕರು ಕೂಡ ನನಗೆ ನೆರವಾಗುತ್ತಿದ್ದರು’ ಎಂದು ಪಾಂಡಾ ಹೇಳಿದ್ದಾರೆ.

‘ಈಗ ಅದೆಲ್ಲಾ ಗತವೈಭವ. ಹತ್ತು ವರ್ಷಗಳ ಹಿಂದೆ ಹೋದಾಗ ನನಗೆ ಕಹಿ ಅನುಭವವಾಯಿತು. ದೇವರ ದರ್ಶನ ಪಡೆಯಲು ಮುಂದಾದ ವೇಳೆ ನನ್ನನ್ನು ನೂಕಿದರು. ಸರಿಯಾದ ದರ್ಶನ ಸಿಗಲಿಲ್ಲ’ ಎಂದಿದ್ದಾರೆ.

‘ನನಗಾದ ಈ ಕಹಿ ಅನುಭವ ಕುರಿತು ತಾಯಿ ಬಳಿ ಹೇಳಿಕೊಂಡೆ. ಆಗ, ನೀವೇ ಏಕೆ ನಮ್ಮ ಗ್ರಾಮದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಬಾರದು. ನೀನು ದರ್ಶನ ಪಡೆಯುವ ಜೊತೆಗೆ ಇತರರಿಗೂ ಈ ಸೌಲಭ್ಯ ಕಲ್ಪಿಸಬಹುದಲ್ಲ ಎಂಬ ಸಲಹೆ ಇತ್ತಳು. ತಾಯಿಯ ಸಲಹೆಯಂತೆ ಈ ದೇವಸ್ಥಾನ ನಿರ್ಮಿಸಿದೆ’ ಎಂದೂ ಹೇಳಿದ್ದಾರೆ.

‘ದೇವಸ್ಥಾನಕ್ಕೆ ಅಂದಾಜು 2 ಸಾವಿರದಷ್ಟು ಜನಕ್ಕೆ ಬರಬಹುದು ಎಂದು ಭಾವಿಸಿದ್ದೆವು. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇರದ ಕಾರಣ ಪೊಲೀಸರಿಗೆ ತಿಳಿಸಿರಲಿಲ್ಲ’ ಎಂದು ಬೇಸರದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.