ADVERTISEMENT

ಕೇಕ್‌ ತರಲು ತಡ: ಪತ್ನಿ–ಪುತ್ರನಿಗೆ ಚಾಕುವಿನಿಂದ ಇರಿದ ಭೂಪ!

ಪಿಟಿಐ
Published 4 ಜೂನ್ 2024, 15:53 IST
Last Updated 4 ಜೂನ್ 2024, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತ‌ನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕೇಕ್‌ ತರುಲು ತಡ ಮಾಡಿದರು ಎಂದು ಕೋಪಗೊಂಡ ವ್ಯಕ್ತಿಯೊಬ್ಬ, ಪತ್ನಿ ಹಾಗೂ ಪುತ್ರನಿಗೆ ಚಾಕುವಿನಿಂದ ಇರಿದಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.

‘ಕಳೆದ ಶನಿವಾರ ಆರೋಪಿ ರಾಜೇಂದ್ರ ಶಿಂದೆಯ ಹುಟ್ಟುಹಬ್ಬವಿತ್ತು. ಮನೆಗೆಲಸ ಮಾಡುತ್ತಿದ್ದ ಆತನ ಪತ್ನಿ, ಕೆಲಸದ ಸ್ಥಳದಲ್ಲಿ ವಿಳಂಬವಾಗಿದ್ದರಿಂದ ಮರುದಿನ ಕೇಕ್‌ ತಂದು ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಈ ವೇಳೆ ಕೋಪಗೊಂಡ ಶಿಂದೆ, ಪತ್ನಿಯೊಂದಿಗೆ ಜಗಳ ಶುರು ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಪುತ್ರನಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಪುತ್ರನ ರಕ್ಷಣೆಗೆ ಮುಂದಾದ ಪತ್ನಿಯ ಮುಂಗೈಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ರಾಜೇಂದ್ರ ತನ್ನ ಪುತ್ರನ ಪಕ್ಕೆಲುಬು ಮತ್ತು ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜೇಂದ್ರ ಪತ್ನಿ ರಂಜನಾ ಶಿಂದೆ ಅವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.