ADVERTISEMENT

ಅಕ್ರಮ ಹಣ ವರ್ಗಾವಣೆ: ಇ.ಡಿ ವಿಚಾರಣೆಗೆ ಹಾಜರಾದ ಮಹಾರಾಷ್ಟ್ರ ಸಚಿವ ಅನಿಲ್ ಪರಬ್

ಪಿಟಿಐ
Published 28 ಸೆಪ್ಟೆಂಬರ್ 2021, 8:06 IST
Last Updated 28 ಸೆಪ್ಟೆಂಬರ್ 2021, 8:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್‌ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗಾಗಿ ಹಾಜರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆಯನ್ನೂ ಹೊಂದಿರುವ ಪರಬ್‌ ಅವರಿಗೆ ಜಾರಿ ನಿರ್ದೇಶನಾಲಯ ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಶನಿವಾರ ಎರಡನೇ ಬಾರಿಗೆ ಸಮನ್ಸ್‌ ಜಾರಿ ಮಾಡಿತ್ತು.

ತನಿಖಾ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಬ್‌, ‘ಈ ಪ್ರಕರಣದಲ್ಲಿ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ‘ ಎಂದು ಹೇಳಿದರು.

ADVERTISEMENT

‘ನಾನು ಇಂದು ಇ.ಡಿ ಎದುರು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ತನಿಖಾ ಸಂಸ್ಥೆಯವರು ನನ್ನನ್ನು ಯಾವ ಉದ್ದೇಶಕ್ಕಾಗಿ ಕರೆದಿದ್ದಾರೆಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಹೆಣ್ಣು ಮಕ್ಕಳು ಮತ್ತು ಶಿವಸೇನಾ ಮುಖ್ಯಸ್ಥ ದಿ. ಬಾಳಾಸಾಹೇಬ್‌ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ‘ ಎಂದು ಸಚಿವರು ಹೇಳಿದರು.

‘ನಾನು ವಿಚಾರಣೆಗೆ ಸಹಕರಿಸುತ್ತೇನೆ. ಇ.ಡಿ ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ‘ ಎಂದು ಅವರು ಹೇಳಿದರು.

ಮೂರು ಅವಧಿಗೆ ಶಾಸಕರಾಗಿರುವ ಅನಿಲ್ ಪರಬ್‌ ಅವರಿಗೆ ಜಾರಿ ನಿರ್ದೇಶನಾಲಯ ಆ. 31ರಂದು ಸಮನ್ಸ್‌ ನೀಡಿತ್ತು. ಆದರೆ, ಸಚಿವರು ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳನ್ನು ಉಲ್ಲೇಖಿಸಿ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು.

ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ‍್ರಕರಣದ ತನಿಖೆಯ ಭಾಗವಾಗಿ ಪರಬ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.