ನವದೆಹಲಿ: ಭಾರತದಲ್ಲಿ ತಯಾರಾದ ಮತ್ತೊಂದು ಕಲುಷಿತ ಕೆಮ್ಮಿನ ಸಿರಪ್ ವಿದೇಶಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ.
ಇದು ಕಳೆದ ಏಳು ತಿಂಗಳಲ್ಲಿ ವರದಿಯಾದ ಮೂರನೇ ನಿದರ್ಶನವಾಗಿದೆ. ಮಾರ್ಷಲ್ ದ್ವೀಪ ಮತ್ತು ಮೈಕ್ರೋನೇಷಿಯಾದಲ್ಲಿ ಕೆಮ್ಮಿನ ಔಷಧಿಯಾಗಿ ಬಳಸುತ್ತಿರುವ ಗ್ವಾಫೆನಾಸಿನ್ (Guaifenesin) ಸಿರಪ್‌ನಲ್ಲಿ ಸ್ವೀಕಾರಾರ್ಹವಲ್ಲದ ಎರಡು ಮಾಲಿನ್ಯಕಾರಕಗಳು ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದಿದೆ. ಈ ಸಿರಪ್ ಮಾನವ ಬಳಕೆಗೆ ಸುರಕ್ಷಿತವಲ್ಲವೆಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.
‘ಮಾರ್ಷಲ್ ದ್ವೀಪದಿಂದ ಈ ಸಿರಪ್‌ನ ಮಾದರಿಗಳನ್ನು ಆಸ್ಟ್ರೇಲಿಯಾದ ಚಿಕಿತ್ಸಕ ಔಷಧ ಸರಕುಗಳ ಆಡಳಿತದ (ಟಿಜಿಎ) ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ವಿಶ್ಲೇಷಿಸಿವೆ. ಉತ್ಪನ್ನವು ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಹೊಂದಿರುವುದನ್ನು ಟಿಜಿಎ ವಿಶ್ಲೇಷಣೆಯಲ್ಲಿ ಪತ್ತೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
ಪಂಜಾಬ್‌ನ ಕ್ಯುಪಿ ಫಾರ್ಮಾಕೆಮ್ ಲಿಮಿಟೆಡ್ ಗ್ವಾಫೆನಾಸಿನ್ ಸಿರಪ್ ತಯಾರಿಸಿದ್ದು, ಹರಿಯಾಣದ ಟ್ರಿಲಿಯಮ್ ಫಾರ್ಮಾ ಮಾರಾಟ ಮಾಡಿದೆ. ತಯಾರಕರು ಅಥವಾ ಮಾರಾಟಗಾರರು ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಡಬ್ಲ್ಯುಎಚ್‌ಒಗೆ ಖಾತರಿ ನೀಡಿಲ್ಲ. ಕಲುಷಿತವಾದ ಈ ಸಿರಪ್ ಸೇವಿಸಿದ ನಂತರ ಪೆಸಿಫಿಕ್ ರಾಷ್ಟ್ರಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಣಿಸಿದೆಯೇ ಎನ್ನುವ ಬಗ್ಗೆ ಡಬ್ಲ್ಯುಎಚ್‌ಒ ಹೆಚ್ಚಿನ ವಿವರಣೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.