ಬಲ್ಲಿಯಾ (ಉತ್ತರ ಪ್ರದೇಶ): ಪಂಜಾಬ್ ಜೈಲಿನಲ್ಲಿದ್ದ ಪಾತಕಿ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಜೈಲಿಗೆ ಕರೆತರಲಾಗಿದ್ದು, ಈಗ ಮುಂದಿನ ಸರದಿ ಗುಜರಾತ್ ಜೈಲಿನಲ್ಲಿರುವ ಮಾಜಿ ಸಂಸದ ಅತಿಕ್ ಅಹ್ಮದ್ ಅವರದ್ದು ಎಂದು ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರೂಪ್ ಶುಕ್ಲಾ, ‘ಪಂಜಾಬ್ ಸರ್ಕಾರದ ಹಲವು ತಂತ್ರಗಳ ನಡುವೆಯೇ ಉತ್ತರ ಪ್ರದೇಶ ಸರ್ಕಾರ ಮುಖ್ತಾರ್ ಅನ್ಸಾರಿಯನ್ನು ರಾಜ್ಯಕ್ಕೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ. ಈಗ ಗುಜರಾತ್ ಜೈಲಿನಲ್ಲಿರುವ ಅತಿಕ್ ಅಹ್ಮದ್ ಅವರನ್ನು ಕರೆತರಬೇಕಿದೆ‘ ಎಂದು ತಿಳಿಸಿದರು.
‘ಬೇರೆ ಬೇರೆ ರಾಜ್ಯಗಳಲ್ಲಿರುವ ಇಂಥ ಅಪರಾಧಿಗಳನ್ನು ತಮ್ಮ ರಾಜ್ಯಕ್ಕೆ ವಾಪಸ್ ಕರೆತಂದು, ಅವರು ಮಾಡಿರುವ ಅಪರಾಧಗಳಿಗೆ ಶಿಕ್ಷೆ ನೀಡುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ‘ ಎಂದು ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ.
ಐದು ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾಗಿದ್ದ 60ರ ಹರೆಯದ ಅತಿಕ್ ಅಹ್ಮದ್ ವಿರುದ್ಧ ಕೊಲೆ, ಅಪಹರಣ, ಅಕ್ರಮ ಗಣಿಗಾರಿಕೆ, ಸುಲಿಗೆ, ಬೆದರಿಕೆ ಮತ್ತು ವಂಚನೆ ಸೇರಿದಂತೆ 90 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಅವರು ಸದ್ಯ ಗುಜರಾತ್ ಜೈಲಿನಲ್ಲಿದ್ದಾರೆ. 2019ರಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಅವರನ್ನು ಉತ್ತರ ಪ್ರದೇಶದಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.