ADVERTISEMENT

ಸಿಎಎ ವಿರೋಧಿ ಕಾರ್ಯಕರ್ತ ಶರ್ಜೀಲ್ ಇಮಾಮ್ ಬಂಧನ

ಬಿಹಾರದ ಜೆಹನಾಬಾದ್‌ನಲ್ಲಿ ಬಂಧಿಸಿದ ದೆಹಲಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
Sharjeel Imam,
Sharjeel Imam,   

ಜೆಹನಾಬಾದ್‌ (ಪಿಟಿಐ): ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಪ್ರತಿಭಟನೆಯಲ್ಲಿಪ್ರಚೋದನಕಾರಿ ಹೇಳಿಕೆ ನೀಡಿ ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಶರ್ಜೀಲ್ ಇಮಾಮ್ ಅವರನ್ನು ಮಂಗಳವಾರ ಬಿಹಾರದ ಜೆಹನಾಬಾದ್‌ ಜಿಲ್ಲೆಯ ಕಾಕೊ ಗ್ರಾಮದಲ್ಲಿ ಬಂಧಿಸಲಾಗಿದೆ’ ಎಂದು ಬಿಹಾರದ ಪೊಲೀಸ್ ಮಹಾನಿರ್ದೇಶಕ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.

‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪಿಎಚ್‌.ಡಿ ಮಾಡುತ್ತಿರುವ ಶರ್ಜೀಲ್ ಇಮಾಮ್ ಉತ್ತರ ಪ್ರದೇಶ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಸೇರಿದಂತೆ ದೆಹಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಶರ್ಜೀಲ್‌ನನ್ನು ಬಿಹಾರದ ಜೆಹನಾಬಾದ್ ಜಿಲ್ಲೆಯ ಆತನ ಸ್ವಗ್ರಾಮ ಕಾಕೊನಲ್ಲಿ ಬಂಧಿಸಲಾಗಿದೆ’ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.

ಶರ್ಜೀಲ್‌ ಅವರನ್ನು ಪತ್ತೆಹಚ್ಚುವ ಸಲುವಾಗಿ ಅವರ ಸಹೋದರ ಮತ್ತು ಚಾಲಕನನ್ನು ಬಿಹಾರ ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ಬಿಹಾರದಲ್ಲಿರುವ ಶರ್ಜೀಲ್ ಅವರ ಪೂರ್ವಜರ ನಿವಾಸದಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು.

ADVERTISEMENT

ಶರ್ಜೀಲ್ ಅವರನ್ನು ಬಿಹಾರದ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದ್ದು, ಪೊಲೀಸರುಅವರನ್ನು ಬಿಹಾರದಲ್ಲಿ ವಿಚಾರಣೆ ಕೈಗೊಳ್ಳುತ್ತಾರೆಯೇ ಅಥವಾ ರಾಜಧಾನಿ ದೆಹಲಿಗೆ ಕರೆದೊಯ್ಯುವರೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಮುಂಬೈನ ಐಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಗಳಿಸಿರುವ ಶರ್ಜೀಲ್, ದೆಹಲಿಯ ಜೆಎನ್‌ಯು ಇತಿಹಾಸ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಅಸ್ಸಾಂ ಮತ್ತು ಈಶಾನ್ಯ ಭಾಗವನ್ನು ಭಾರತದಿಂದ ಪ್ರತ್ಯೇಕಿಸಬೇಕು ಎನ್ನುವ ಶರ್ಜೀಲ್ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಶರ್ಜೀತ್ ನಾಪತ್ತೆಯಾಗಿದ್ದರು.

‘ಐದು ಲಕ್ಷ ಜನರು ಸಂಘಟಿತರಾದಲ್ಲಿ ನಾವು ಈಶಾನ್ಯ ಭಾಗವನ್ನು ಭಾರತದಿಂದ ಶಾಶ್ವತವನ್ನು ಪ್ರತ್ಯೇಕಿಸಬಹುದು. ಅದು ಸಾಧ್ಯವಾಗದಿದ್ದಲ್ಲಿ, ರೈಲ್ವೆ ಟ್ರ್ಯಾಕ್‌ ಮತ್ತು ರಸ್ತೆಗಳಲ್ಲಿ ಕೀವನ್ನು ಎಸೆಯಿರಿ. ಇದನ್ನು ಸ್ವಚ್ಛಗೊಳಿಸಲು ವಾಯುಪಡೆಗೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುವುದು ನಮ್ಮ ಜವಾಬ್ದಾರಿ. ಆಗ ಸರ್ಕಾರದವರು ನಮ್ಮ ಮಾತು ಕೇಳುತ್ತಾರೆ. ಅಸ್ಸಾಮಿನಲ್ಲಿರುವ ಮುಸ್ಲಿಮರ ಪರಿಸ್ಥಿತಿ ಏನೆಂದು ನಮಗೆ ಗೊತ್ತು... ಅವರನ್ನು ಬಂಧನ ಶಿಬಿರಗಳಲ್ಲಿ ಇರಿಸಲಾಗುತ್ತಿದೆ’ ಎಂದು ಶರ್ಜೀತ್ ವಿಡಿಯೊದಲ್ಲಿ ಹೇಳಿದ್ದಾರೆ.

ನಿತೀಶ್ ಪ್ರತಿಕ್ರಿಯೆ: ಜನರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ, ದೇಶ ವಿಭಜನೆಯ ಬಗ್ಗೆ ಯಾರೂ ಮಾತನಾಡಬಾರದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇಮಾಮ್ ಅವರನ್ನು ಬಂಧಿಸುವಲ್ಲಿ ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.