
ನವದೆಹಲಿ: ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ಜಾರಿ ಮಾಡಲಾಗಿರುವ ಮತಾಂತರ ನಿಷೇಧ ಕಾಯ್ದೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಿಜೆಐ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಹಾಗೂ ಎನ್.ವಿ ಅಂಜಾರಿಯಾ ಅವರಿದ್ದ ಪೀಠ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ಗೆ ನಿಗದಿ ಪಡಿಸಿತು.
ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಪಟ್ಟಿ ಮಾಡಿ ಎಂದು ಅರ್ಜಿದಾರರ ಪರ ವಕೀಲರು ವಿನಂತಿಸಿದರು. ‘ಅದು ಸಾಧ್ಯವಿಲ್ಲ, ನನಗೆ ತೀರ್ಪುಗಳನ್ನು ಬರೆಯಬೇಕಿದೆ’ ಎಂದು ನವೆಂಬರ್ 23ರಂದು ನಿವೃತ್ತಿಯಾಗಲಿರುವ ಸಿಜೆಐ ಹೇಳಿದರು.
ಸೆಪ್ಟೆಂಬರ್ 16 ರಂದು, ಮತಾಂತರ ವಿರೋಧಿ ಕಾನೂನುಗಳ ಮೇಲೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಹಲವಾರು ರಾಜ್ಯಗಳ ನಿಲುವನ್ನು ಪೀಠವು ಕೋರಿತ್ತು.
ರಾಜ್ಯಗಳು ಉತ್ತರ ಸಲ್ಲಿಸಿದ ನಂತರ ಅಂತಹ ಕಾನೂನುಗಳಿಗೆ ತಡೆ ನೀಡುವ ಮನವಿಯನ್ನು ಪರಿಗಣಿಸುವುದಾಗಿ ಸಿಜೆಐ ನೇತೃತ್ವದ ಪೀಠ ಸ್ಪಷ್ಟಪಡಿಸಿತು.
ರಾಜ್ಯಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ, ಎರಡು ವಾರಗಳ ನಂತರ ಹೆಚ್ಚುವರಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿತ್ತು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಛತ್ತೀಸಗಢ, ಗುಜರಾತ್, ಹರಿಯಾಣ, ಜಾರ್ಖಂಡ್ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.