ADVERTISEMENT

ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗ: ಖಾಲಿ ಹುದ್ದೆ ಭರ್ತಿಗೆ ರಾಹುಲ್‌ ಆಗ್ರಹ

ಪಿಟಿಐ
Published 28 ಫೆಬ್ರುವರಿ 2025, 14:32 IST
Last Updated 28 ಫೆಬ್ರುವರಿ 2025, 14:32 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗದಲ್ಲಿ (ಎನ್‌ಸಿಎಸ್‌ಸಿ) ಹುದ್ದೆಗಳು ಖಾಲಿಯಿರುವುದಕ್ಕೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ದಲಿತರ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಎಸ್‌.ಸಿ ರಾಷ್ಟ್ರೀಯ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದನ್ನು ದುರ್ಬಲಗೊಳಿಸುವುದು ದಲಿತರ ಸಾಂವಿಧಾನಿಕ ಮತ್ತು ಸಾಮಾಜಿಕ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ADVERTISEMENT

‘ಬಿಜೆಪಿ ಸರ್ಕಾರದ ದಲಿತ ವಿರೋಧಿ ಮನಃಸ್ಥಿತಿಗೆ ಮತ್ತೊಂದು ಪುರಾವೆ. ದಲಿತರ ಹಕ್ಕುಗಳನ್ನು ರಕ್ಷಿಸುವ ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ. ಆಯೋಗದ ಎರಡು ಪ್ರಮುಖ ಹುದ್ದೆಗಳು ಕಳೆದ ಒಂದು ವರ್ಷದಿಂದ ಖಾಲಿಯಾಗಿವೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಅಯೋಗವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿದ್ದರೆ, ದಲಿತರ ಧ್ವನಿಯನ್ನು ಕೇಳುವವರು ಯಾರು? ಅವರ ದೂರುಗಳಿಗೆ ಸ್ಪಂದಿಸುವವರು ಯಾರು? ಪ್ರಧಾನಿ ಮೋದಿ ಅವರೇ, ಆಯೋಗದ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿಗೊಳಿಸಲು ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.

ಕಿಶೋರ್‌ ಮಖ್ವಾನಾ ನೇತೃತ್ವದ ಆಯೋಗದಲ್ಲಿ ಎರಡು ಹುದ್ದೆಗಳು (ಉಪಾಧ್ಯಕ್ಷ ಮತ್ತು ಒಬ್ಬ ಸದಸ್ಯ) ಖಾಲಿಯಿವೆ ಎಂಬ ಮಾಹಿತಿ ಎನ್‌ಸಿಎಸ್‌ಸಿ ವೆಬ್‌ಸೈಟ್‌ನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.