ADVERTISEMENT

ವೈಎಸ್‌ಆರ್ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್‌ ಆದೇಶ

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ

ಪಿಟಿಐ
Published 12 ಅಕ್ಟೋಬರ್ 2020, 15:34 IST
Last Updated 12 ಅಕ್ಟೋಬರ್ 2020, 15:34 IST
ಆಂಧ್ರಪ್ರದೇಶ ಮುಖ್ಯಮಂತ್ರಿ, ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ
ಆಂಧ್ರಪ್ರದೇಶ ಮುಖ್ಯಮಂತ್ರಿ, ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ    

ಅಮರಾವತಿ: ವೈಎಸ್‌ಆರ್ ಕಾಂಗ್ರೆಸ್ ನಾಯಕರು ಕೆಲವು ನ್ಯಾಯಾಧೀಶರು ಮತ್ತು ನ್ಯಾಯಾಂಗದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಆಂಧ್ರಪ್ರದೇಶ ಹೈಕೋರ್ಟ್‌ ಸಿಬಿಐಗೆ ವಹಿಸಿ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸುತ್ತಿರುವ ತನಿಖೆಯ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಮೂರ್ತಿ ರಾಕೇಶ್ ಕುಮಾರ್ ಮತ್ತು ಜೆ.ಉಮಾದೇವಿ ಅವರನ್ನೊಳಗೊಂಡ ಪೀಠವು ಸಿಬಿಐಗೆ ಸೂಚಿಸಿದೆ. 8 ವಾರಗಳ ಒಳಗೆ ವರದಿ ಸಲ್ಲಿಸುವಂತೆಯೂ ಹೇಳಿದೆ.

ಸಿಐಡಿ ತನಿಖಾ ವಿಧಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠವು, ವೈಎಸ್‌ಆರ್ ಕಾಂಗ್ರೆಸ್ ನಾಯಕರನ್ನು ರಕ್ಷಿಸುವ ಸಲುವಾಗಿಯೇ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದೆ. ಸಿಬಿಐ ತನಿಖೆಗೆ ಸಹಕರಿಸುವಂತೆ ರಾಜ್ಯ ಸರ್ಕಾರಕ್ಕೂ ಸೂಚಿಸಲಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಕೆಲವು ತೀರ್ಪುಗಳನ್ನು ನೀಡಿದ ಬಳಿಕ ವೈಎಸ್‌ಆರ್ ಕಾಂಗ್ರೆಸ್‌ನ ಕೆಲವು ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನ್ಯಾಯಾಧೀಶರು ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಸಿಐಡಿಗೆ ದೂರು ನೀಡಿದ್ದಲ್ಲದೆ 9 ಮಂದಿಯ ಹೆಸರು ಮತ್ತು ಸಾಕ್ಷಿಯನ್ನೂ ನೀಡಿದ್ದರು.

ವಿಧಾನಸಭೆ ಸ್ಪೀಕರ್ ತಮ್ಮಿನೇನಿ ಸೀತಾರಾಮ್, ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ಸಂಸದರಾದ ವಿ.ವಿಜಯಸಾಯಿ ರೆಡ್ಡಿ, ನಂದಿಗಾಂ ಸುರೇಶ್, ಮಾಜಿ ಶಾಸಕ ಎ.ಕೃಷ್ಣಮೋಹನ್ ಮತ್ತು ಇತರ ನಾಯಕರು ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇವರ ವಿರುದ್ಧ ಸಿಐಡಿ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.