ADVERTISEMENT

ಮೂಢನಂಬಿಕೆ ತಡೆ ಕಾಯ್ದೆ ರೂಪಿಸಿದ ಕೇರಳ

ಪಿಟಿಐ
Published 15 ಜುಲೈ 2019, 20:00 IST
Last Updated 15 ಜುಲೈ 2019, 20:00 IST
   

ತಿರುವನಂತಪುರ: ಮಾಟ‌ಮಂತ್ರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಎಚ್ಚೆತ್ತಿರುವ ಕೇರಳ ಸರ್ಕಾರ, ಮೂಢನಂಬಿಕೆ ತಡೆ ಕಾಯ್ದೆ ಜಾರಿಗೆ ಮುಂದಾಗಿದೆ. ಮೂಢನಂಬಿಕೆ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ನಿಗ್ರಹಿಸುವುದು ಕಾಯ್ದೆಯ ಉದ್ದೇಶ.

ವಾಮಾಚಾರ, ಮೂಢನಂಬಿಕೆ, ಅಮಾನವೀಯ ದುಷ್ಟ ಆಚರಣೆಗಳ ತಡೆ ಹಾಗೂ ನಿರ್ಮೂಲನೆ 2019 ಮಸೂದೆಯ ಕರಡು ಸಿದ್ಧವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ. 2017ರಲ್ಲಿ ಕರ್ನಾಟಕ ಹಾಗೂ 2013ರಲ್ಲಿ ಮಹಾರಾಷ್ಟ್ರ ಸರ್ಕಾರಗಳು ಜಾರಿಗೊಳಿಸಿದ್ದ ಮೂಢನಂಬಿಕೆ ತಡೆ ಕಾಯ್ದೆಯ ಅಂಶಗಳನ್ನು ಆಧರಿಸಿ ಕೇರಳ ಕಾನೂನು ಪರಿಷತ್ ಕರಡು ಸಿದ್ಧಪಡಿಸಿದೆ.

ಮಸೂದೆಯಲ್ಲಿ ಏನಿದೆ:

ADVERTISEMENT

ಮೂಢನಂಬಿಕೆ ಹೆಸರಿನಲ್ಲಿ ವಂಚನೆ ಎಸಗುವುದು ಸೇರಿದಂತೆ ಅಮಾನವೀಯ ಆಚರಣೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಮೋಸದ ಆಚರಣೆಗಳಿಗೆ ಜನರು ಬಲಿಯಾಗದಂತೆ ರಕ್ಷಿಸಲು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಮಸೂದೆ ಒತ್ತಿ ಹೇಳುತ್ತದೆ. ಹೊಂದಿದೆ.

ಕೇರಳ ಜನರ ಮನಸಿನಲ್ಲಿ ಮೂಢನಂಬಿಕೆ ಆಳವಾಗಿ ಬೇರೂರಿದೆ. ಜಾಗೃತಿ ಕಾರ್ಯಕ್ರಮ ಜಾರಿಗೆ ಮಸೂದೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದುಕೇರಳ ಕಾನೂನು ಸುಧಾರಣಾ ಪರಿಷತ್ ಉಪಾಧ್ಯಕ್ಷ ಕೆ.ಶಶಿಧರನ್ ಹೇಳಿದರು.

ಮೂಢನಂಬಿಕೆಯ ಹಲವು ಪ್ರಕರಣಗಳು ಜರುಗುತ್ತಿದ್ದರೂ ನಮ್ಮದು ನಾಗರಿಕ ಸಮಾಜ ಎಂದು ಕರೆಯಲು ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಕೆಲವು ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ’ ಎಂದು ಮಾಜಿ ಕಾನೂನು ಕಾರ್ಯದರ್ಶಿ ನಾಯರ್ ಹೇಳಿದರು.

ಅಪರಾಧ, ಶಿಕ್ಷೆ ಮತ್ತು ವಿನಾಯಿತಿ

*ಬಹಿಷ್ಕಾರ ಹೇರಿಕೆ, ಬೆತ್ತಲೆ ಮೆರವಣಿಗೆಗೆ ಒತ್ತಾಯಿಸಿದರೆ ಶಿಕ್ಷೆ

* ಭೂತ ಬಿಡಿಸುವ ಹೆಸರಿನಲ್ಲಿ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧ

* ಮುಟ್ಟಿನ ಅವಧಿ ಹಾಗೂ ಪ್ರಸವದ ನಂತರ ಮಹಿಳೆಯನ್ನು ಒಂಟಿಯಾಗಿಸಿದರೆ ಸಜೆ

* ಒಂದು ವರ್ಷದಿಂದ 7 ವರ್ಷದವರೆಗೆ ಸೆರೆವಾಸಕ್ಕೆ ಅವಕಾಶ

* ₹5 ಸಾವಿರದಿಂದ ₹50 ಸಾವಿರದವರೆಗೆ ದಂಡ

* ಧಾರ್ಮಿಕ ಸ್ಥಳ, ಮನೆಗಳಲ್ಲಿ ನಡೆಯುವ ಪೂಜೆ, ಹಬ್ಬ, ಆಚರಣೆಗಳಿಗೆ ವಿನಾಯಿತಿ

* ಯಾರಿಗೂ ತೊಂದರೆಯಾಗದಂತೆ ದೇಗುಲ, ಚರ್ಚ್, ಮಸೀದಿ, ಇತರೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಆಚರಣೆಗಳಿಗೆ ಅಡ್ಡಿಯಿಲ್ಲ

* ಧಾರ್ಮಿಕ ಮೆರವಣಿಗೆ, ಪ್ರಾರ್ಥನೆಗೆ ನಿರ್ಬಂಧ ಇಲ್ಲ

* ವಂಚನೆ ಉದ್ದೇಶವಿಲ್ಲದ ಜ್ಯೋತಿಷಕ್ಕೆ ವಿನಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.