ಬಂಧನ
ಲಖನೌ: ಉತ್ತರ ಪ್ರದೇಶದ ಉದ್ಯಮಿಯ ಬಂಧನದ ಬೆನ್ನಲ್ಲೇ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ರಾಂಪುರ ಜಿಲ್ಲೆಯ ನಿವಾಸಿಯನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಾರಾಣಸಿಯಲ್ಲಿ ಬಂಧಿಸಿದೆ.
ಮೂಲಗಳ ಪ್ರಕಾರ, ಗುರುವಾರ ಎಟಿಎಸ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಇ-ಲಬ್ಬೈಕ್ (ಟಿಎಲ್‌ಪಿ) ಸದಸ್ಯನೆಂದು ಹೇಳಲಾದ ಟಫೈಲ್ ಎಂಬಾತನನ್ನು ಬಂಧಿಸಿದ್ದು, ಆತ ತನ್ನ ಪಾಕಿಸ್ತಾನದ ನಿರ್ವಾಹಕರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ.
ಟಿಎಲ್‌ಪಿ ನಾಯಕ ಮೌಲಾನಾ ಶಾದ್ ರಿಜ್ವಿ ಭಾಗವಾಗಿದ್ದ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಟಫೈಲ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ಮತ್ತು ಭಾರತದಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರುವುದು ಸೇರಿದಂತೆ ಹಲವು ಸಂದೇಶಗಳಿವೆ.
ರಾಜ್‌ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣಗಳು ಮತ್ತು ಕೆಂಪು ಕೋಟೆಯಂತಹ ಪ್ರಮುಖ ಸ್ಥಳಗಳ ಚಿತ್ರಗಳನ್ನು ಟಫೈಲ್ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರರನ್ನು ಗುಂಪಿಗೆ ಸೇರುವಂತೆ ಆಕರ್ಷಿಸುವಲ್ಲಿಯೂ ಅವನು ಸಕ್ರಿಯನಾಗಿದ್ದನು.
ಪ್ರಾಥಮಿಕ ತನಿಖೆಯ ಪ್ರಕಾರ ಟಫೈಲ್, ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿ ನಫೀಸಾ ಎಂಬಾಕೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಟಫೈಲ್ ಗೂಢಚಾರ ಜಾಲದ ಭಾಗವಾಗಿದ್ದರು. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಫೈಲ್ ವಿರುದ್ಧ ಲಖನೌದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಟಿಎಸ್ ಈಗ ಜಾಲದ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆ.
ಕೆಲವು ದಿನಗಳ ಹಿಂದೆ, ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಾಂಪುರ ಜಿಲ್ಲೆಯ ತಾಂಡಾ ಪ್ರದೇಶದ ಶೆಹಜಾದ್ ಎಂದು ಗುರುತಿಸಲಾದ ಉದ್ಯಮಿಯನ್ನು ಎಟಿಎಸ್ ಬಂಧಿಸಿತ್ತು.
ಶೆಹಜಾದ್ ಹಲವಾರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು ಮತ್ತು ಹಲವು ಐಎಸ್‌ಐ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು. ಅವರ ನಿರ್ವಾಹಕರ ನಿರ್ದೇಶನದ ಮೇರೆಗೆ ಐಎಸ್‌ಐ ಏಜೆಂಟ್‌ಗಳಿಗೆ ಹಣಕಾಸು ಒದಗಿಸಿದ್ದರು.
ಕಳೆದ ಕೆಲವು ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಮಂದಿ ಶಂಕಿತ ಐಎಸ್‌ಐ 'ಏಜೆಂಟ್'ಗಳನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.