ADVERTISEMENT

ರಾಜಧಾನಿಯಾಗಿ ಅಮರಾವತಿ ಮಾತ್ರ ಅಭಿವೃದ್ಧಿಪಡಿಸಬೇಕು: ಸುಪ್ರೀಂ ಮೊರೆ ಹೋದ ಆಂಧ್ರ

ಅಮರಾವತಿಯನ್ನಷ್ಟೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 14:20 IST
Last Updated 17 ಸೆಪ್ಟೆಂಬರ್ 2022, 14:20 IST
   

ನವದೆಹಲಿ: ರಾಜ್ಯ ಸರ್ಕಾರವು ಅಮರಾವತಿ ನಗರವನ್ನಷ್ಟೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಹೈಕೋರ್ಟ್‌ ಮಾರ್ಚ್‌ 3ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಸರ್ಕಾರವು ವಿಶಾಖಪಟ್ಟಣವನ್ನು ಆಡಳಿತಾತ್ಮಕ ರಾಜಧಾನಿ, ಕರ್ನೂಲನ್ನು ನ್ಯಾಯಾಂಗದ ರಾಜಧಾನಿ ಹಾಗೂ ಅಮರಾವತಿಯನ್ನು ಶಾಸಕಾಂಗದ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿತ್ತು. ಇದನ್ನು ಹೈಕೋರ್ಟ್‌ ತಿರಸ್ಕರಿಸಿತ್ತು.

ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಕೀಲ ಮೆಹಫೂಜ್‌ ನಜ್ಕಿ ಅವರು,‘ರಾಜಧಾನಿಯನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್‌ ಹೇಳಿದೆ. ಇದು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಸಂವಿಧಾನದ ಸಂಯುಕ್ತ ವ್ಯವಸ್ಥೆಯಡಿ ಪ್ರತಿಯೊಂದು ರಾಜ್ಯಕ್ಕೂ ತನ್ನ ರಾಜಧಾನಿಯನ್ನು ಎಲ್ಲಿ ಸ್ಥಾಪಿಸಬೇಕೆಂಬ ಅಂತರ್ಗತ ಹಕ್ಕು ಇರುತ್ತದೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹಾಗೂ ಎಪಿ ಡೀಸೆಂಟ್ರಲೈಸೇಷನ್‌ ಆ್ಯಂಡ್‌ ಇನ್‌ಕ್ಲೂಸಿವ್‌ ಡೆವಲಪ್‌ಮೆಂಟ್‌ ಆ‍ಫ್‌ ಆಲ್‌ ರೀಜನ್ಸ್‌ ಕಾಯ್ದೆ ರದ್ದುಪಡಿಸಿದ್ದನ್ನು ಪ್ರಶ್ನಿಸಿ ರೈತ ಸಮೂಹವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು. ಆರು ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.