ADVERTISEMENT

10,12ನೇ ತರಗತಿಗಳಿಗೆ ವರ್ಷದಲ್ಲಿ ಎರಡು ಪರೀಕ್ಷೆ ಐಚ್ಛಿಕ-ಧರ್ಮೇಂದ್ರ ಪ್ರಧಾನ್‌

ಪಿಟಿಐ
Published 8 ಅಕ್ಟೋಬರ್ 2023, 15:50 IST
Last Updated 8 ಅಕ್ಟೋಬರ್ 2023, 15:50 IST
ಧರ್ಮೇಂದ್ರ ಪ್ರಧಾನ್‌ –ಪಿಟಿಐ ಚಿತ್ರ
ಧರ್ಮೇಂದ್ರ ಪ್ರಧಾನ್‌ –ಪಿಟಿಐ ಚಿತ್ರ   

ನವದೆಹಲಿ : ‘10 ಮತ್ತು 12ನೇ ತರಗತಿಗಳಿಗೆ ವರ್ಷದಲ್ಲಿ ಎರಡು ಬಾರಿ ನಡೆಸಲಾಗುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದು ಕಡ್ಡಾಯವಲ್ಲ. ಇದು ಐಚ್ಛಿಕವಾಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದಾರೆ.

‘ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ವಿಧಾನ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ವರ್ಷಕ್ಕೆ ಒಂದು ಬಾರಿ ಪರೀಕ್ಷೆ ಬರೆಯುವ ಬದಲು, ನೂತನ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್‌) ಅನುಸಾರ ಎರಡು ಬಾರಿ ಪರೀಕ್ಷೆ ಬರೆಯಬಹುದು. ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಜೆಇಇ ರೀತಿಯಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಪರೀಕ್ಷೆಗಳಿಗೆ ಹಾಜರಾಗಬಹುದು. ಎರಡು ಪರೀಕ್ಷೆಗಳ ಪೈಕಿ ಅತ್ಯುತ್ತಮ ಅಂಕ ಗಳಿಸಿದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಇದು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯಾವುದೇ ಒತ್ತಡ ಹೇರುವುದಿಲ್ಲ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘2024ರಿಂದಲೇ ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲು ಪ್ರಯತ್ನಿಸುತ್ತೇವೆ. ಒಂದೇ ಬಾರಿ ನಡೆಸುವ ಪರೀಕ್ಷೆಯ ಭಯದಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಸ ವಿಧಾನದ್ದು. ವಿದ್ಯಾರ್ಥಿಗಳು ಸಹ ಈ ಹೊಸ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಶಿಕ್ಷಣ ಸಚಿವಾಲಯ ಆಗಸ್ಟ್‌ನಲ್ಲಿ ಎನ್‌ಸಿಎಫ್‌ ಘೋಷಿಸಿದ ಬಳಿಕ, ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.