ADVERTISEMENT

ಐಫೋನ್‌ ಹ್ಯಾಕ್‌ ಯತ್ನ: ಸರ್ಕಾರಿ ಸಂಸ್ಥೆಗಳತ್ತ ಸಂಶಯದ ಬೊಟ್ಟು– ಚಿದಂಬರಂ

ಪಿಟಿಐ
Published 1 ನವೆಂಬರ್ 2023, 13:17 IST
Last Updated 1 ನವೆಂಬರ್ 2023, 13:17 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ವಿರೋಧ ಪಕ್ಷಗಳ ನಾಯಕರ ಐಫೋನ್‌ ಹ್ಯಾಕ್‌ ಮಾಡುತ್ತಿರುವ ಪ್ರಯತ್ನಗಳ ಕುರಿತು ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವುದು, ಪೆಗಾಸಸ್‌ ಪ್ರಕರಣದ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳತ್ತ ಮತ್ತೊಮ್ಮೆ ಸಂಶಯದ ದೃಷ್ಟಿ ಹರಿಯುವಂತೆ ಮಾಡಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಬುಧವಾರ ಹೇಳಿದ್ದಾರೆ.

‘ಇದು ಸದ್ಯದ ಮಟ್ಟಿಗೆ ಸಂಶಯವಷ್ಟೆ’ ಎಂದೂ ಅವರು ತಿಳಿಸಿದ್ದಾರೆ. 

‘‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ಐಫೋನ್‌ಗಳನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಕುರಿತು ವಿಪಕ್ಷಗಳ ಹಲವು ನಾಯಕರಿಗೆ ಎಚ್ಚರಿಕೆ ಸಂದೇಶ ಬಂದಿರುವುದನ್ನು ನಿರಾಕರಿಸುವಂತಿಲ್ಲ. ಆದರೆ, ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿದ್ದೇಕೆ? ವಿರೋಧ ಪಕ್ಷಗಳ ನಾಯಕರ ಫೋನ್‌ಗಳಲ್ಲಿನ ಮಾಹಿತಿ ಕಳ್ಳತನ ಮಾಡಲು ಯಾರು ಆಸಕ್ತಿ ಹೊಂದಿದ್ದಾರೆ’ ಎಂದು ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ADVERTISEMENT

ಸಭೆಗೆ ಕಾರ್ತಿ ಒತ್ತಾಯ: ವಿಪಕ್ಷಗಳ ಸಂಸದರ ಐಫೋನ್‌ ಹ್ಯಾಕ್‌ ಯತ್ನ ಕುರಿತು ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವ ಕುರಿತು ಚರ್ಚಿಸಲು ಕೂಡಲೇ ಸಭೆ ನಡೆಸುವಂತೆ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಬುಧವಾರ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಪ‍್ರತಾಪ್‌ರಾವ್ ಜಾಧವ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.

‘ಫೋನ್‌ಗಳ ಹ್ಯಾಕ್‌ ಯತ್ನದ ಕುರಿತು ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿರುವವರನ್ನು ಸಭೆಗೆ ಆಹ್ವಾನಿಸಬೇಕು. ಆ್ಯಪಲ್‌ ಕಂಪನಿ ಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.