ADVERTISEMENT

ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಗೆ ಹೊರೆಯಾಗಲಿದೆ ರೈತರ ಸಾಲ ಮನ್ನಾ  

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 14:52 IST
Last Updated 24 ಡಿಸೆಂಬರ್ 2018, 14:52 IST
   

ನವದೆಹಲಿ: ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವುರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ತಮ್ಮ ಮಾತು ಉಳಿಸಿಕೊಂಡಿತು.ಚುನಾವಣೆಗೆ ಮುನ್ನ ಮತದಾರರಿಗೆ ನೀಡಿದ ಭರವಸೆಯಾಗಿತ್ತು ರೈತರಸಾಲ ಮನ್ನಾ. ಚುನಾವಣೆ ಗೆದ್ದ ಕೂಡಲೇ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಆ ಭರವಸೆಯನ್ನು ಪೂರೈಸಿತು.

ಆದರೆ ಈ ಸಾಲಮನ್ನಾದಿಂದಾಗಿ ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ಹೊಡೆತ ಉಂಟಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.ಈ ಆರ್ಥಿಕ ವರ್ಷದ ಬಜೆಟ್‍ನಲ್ಲಿ ಮೀಸಲಿಟ್ಟಿದ್ದ ಹಣದ ಶೇ.70 ಹಣವನ್ನು ಅಧಿಕಾರದಿಂದ ಕೆಳಗಿಳಿದಿದ್ದ ಬಿಜೆಪಿ ಸರ್ಕಾರ ವಿನಿಯೋಗಿಸಿತ್ತು.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ರೈತರ ಹೃಸ್ವ ಅವಧಿಯ ಸಾಲಗಳನ್ನು ಮನ್ನಾ ಮಾಡಲಾಗಿತ್ತು.ಆದರೆ ಛತ್ತೀಸಗಡದಲ್ಲಿ ಗ್ರಾಮೀಣ ಬ್ಯಾಂಕ್‍ಗಳಿಂದ ಪಡೆದ ಸಾಲಗಳನ್ನೂ ಮನ್ನಾ ಮಾಡಲಾಗಿದೆ.ಸಾಲಮನ್ನಾದಿಂದಾಗಿ ಮಧ್ಯಪ್ರದೇಶದಲ್ಲಿ ₹35,000-38,000 ಕೋಟಿ, ರಾಜಸ್ಥಾನದಲ್ಲಿ ₹18,000 ಕೋಟಿ ಮತ್ತು ಛತ್ತೀಸಗಡಲ್ಲಿ ₹6,100 ಕೋಟಿಯಷ್ಟು ಮೊತ್ತ ಸರ್ಕಾರದ ಮೇಲೆ ಹೊರೆಯಾಗಲಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳುಗಳು ಇರುವಾಗ ಇಷ್ಟೊಂದು ಮೊತ್ತದ ಹೊರೆಯನ್ನು ಹೊರುವುದು ಸರ್ಕಾರಗಳಿಗೆ ಕಷ್ಟವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಈ ಹಿಂದೆ ಈ ರಾಜ್ಯಗಳಲ್ಲಿ ಆಡಳಿತ ನಡೆಸಿದ್ದ ಸರ್ಕಾರಗಳು ರಾಜ್ಯ ಬೊಕ್ಕಸದಿಂದ ಶೇ.75ಕ್ಕಿಂತಲೂ ಹೆಚ್ಚು ಖರ್ಚು ಮಾಡಿದ್ದು, ಹೊಸ ಸರ್ಕಾರಗಳಿಗೆ ಹೊರೆಯಾಗಲಿದೆ.

ಪ್ರತಿ ಕುಟುಂಬದಲ್ಲಿನ ನಿರುದ್ಯೋಗಿ ವ್ಯಕ್ತಿಗಳಿಗೆ ₹3,500ರಿಂದ ₹10,000 ವರೆಗೆ ಭತ್ಯೆ ನೀಡುವುದಾಗಿ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಚುನಾವಣೆ ಭರವಸೆ ನೀಡಲಾಗಿತ್ತು. ನಿರುದ್ಯೋಗಿಗಳಿಗೆ ನಿರುದ್ಯೋಗಿ ವೇತನ ನೀಡುವುದಾಗಿ ಛತ್ತೀಸಗಡದಲ್ಲಿ ಹೇಳಲಾಗಿತ್ತು.ಇದು ಮಾತ್ರವಲ್ಲದೆ ವಿದ್ಯುತ್ ದರ ಕಡಿತ, ಉಚಿತ ಶಿಕ್ಷಣ , ಔಷಧಿ ನೀಡಿವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.ಛತ್ತೀಸಗಡದಲ್ಲಿ ಮದ್ಯ ನಿಷೇಧಿಸುವುದಾಗಿಯೂ ಕಾಂಗ್ರೆಸ್ ಹೇಳಿತ್ತು. ಆದರೆ 2018-19 ಆರ್ಥಿಕ ವರ್ಷದಲ್ಲಿ ಇದಕ್ಕೆಲ್ಲಾ ಹಣ ಹೊಂದಿಸುವುದು ಹೇಗೆ ಎಂಬುದು ಕಾಂಗ್ರೆಸ್ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

2018- 19 ಆರ್ಥಿಕ ವರ್ಷದಲ್ಲಿ ₹1,86,683 ಕೋಟಿ ಮಧ್ಯ ಪ್ರದೇಶ ಬಜೆಟ್ ನಲ್ಲಿ ಮೀಸಲಿರಿಸಲಾಗಿತ್ತು.ಅಕ್ಟೋಬರ್ ತಿಂಗಳ ವರೆಗಿನ ಲೆಕ್ಕಾಚಾರ ಪ್ರಕಾರರ ಇದರಲ್ಲಿ ₹1,25,000 ಕೋಟಿ ವಿವಿಧ ಯೋಜನೆಗಳಿಗಾಗಿ ಖರ್ಚು ಮಾಡಲಾಗಿದೆ.ಇದರೊಂದಿಗೆ ಸಾಲಮನ್ನಾ ಕೂಡಾ ಮಾಡಿದರೆ ರಾಜ್ಯದ ಬೊಕ್ಕಸ ಖಾಲಿಯಾಗುವ ಪರಿಸ್ಥಿತಿ ಉಂಟಾಗುತ್ತದೆ.ಇತರೆಡೆಯಿಂದ ಸಾಲ ಪಡೆಯುವ ಅವಕಾಶ ಇದ್ದರೂ ಚುನಾವಣೆಗೆ ಮುನ್ನವೇ ಶೇ.90ರಷ್ಟು ಸಾಲ ಪಡೆದಾದಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ.

ರಾಜಸ್ಥಾನದ ಬಜೆಟ್ ಮೊತ್ತದ 6ನೇ ಒಂದು ಭಾಗದಷ್ಟಿದೆ ಸಾಲ ಮನ್ನಾದ ಮೊತ್ತ. ಈ ಆರ್ಥಿಕ ವರ್ಷದಲ್ಲಿ ₹1,07,865 ಕೋಟಿ ಮೊತ್ತವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ.ಇದರಲ್ಲಿ ₹77,000 ಕೋಟಿ ಖರ್ಚಾಗಿದೆ. ಚುನಾವಣೆ ಮುನ್ನ ನೀಡಿದ ಭರವಸೆ ಪೂರೈಸಬೇಕೆಂದಾದರೆ ಬಜೆಟ್ ಮೊತ್ತದ ಶೇ.25ರಷ್ಟನ್ನು ಖರ್ಚು ಮಾಡಬೇಕಿದೆ. ಹೆಚ್ಚಿನ ಹಣದ ಹೊರೆ ಆರ್ಥಿಕ ಕುಸಿತಕ್ಕೆ ಕಾರಣಕ್ಕೆ ಕಾರಣವಾಗುತ್ತದೆ ಎಂದು ರಾಜಸ್ಥಾನ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ವಿ.ವಿ.ಸಿಂಗ್ ಹೇಳಿದ್ದಾರೆ.₹36,000 ಕೋಟಿ ಸಾಲ ಪಡೆಯಬಹುದಾಗಿದ್ದರೂ ಅದರಲ್ಲಿ ಈಗಾಗಲೇ ₹25,000 ಕೋಟಿ ಸಾಲ ಪಡೆದಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.

ಛತ್ತೀಸಗಡದಲ್ಲಿ ಸಾಲ ಮನ್ನಾ ಮಾಡುವುದರ ಜತೆಗೆ ಭತ್ತ ಮತ್ತು ಜೋಳದ ಬೆಂಬಲ ಬೆಲೆ ಏರಿಕೆ ಮಾಡುವುದರ ಮೂಲಕ ಒಟ್ಟು ಬಜೆಟ್‍ನ 10ನೇ ಒಂದು ಭಾಗ ಸರ್ಕಾರಕ್ಕೆ ಹೊರೆಯಾಗಲಿದೆ.ಇಲ್ಲಿ ₹83 ,179 ಕೋಟಿ ಮೊತ್ತವನ್ನು 2018-19ರ ಆರ್ಥಿಕ ವರ್ಷದಲ್ಲಿ ಮೀಸಲಿಡಲಾಗಿದೆ.

ರಾಜಕೀಯ ಪಕ್ಷಗಳು ರೈತರ ಸಾಲ ಮನ್ನಾ ಮಾಡುವುದರಬಗ್ಗೆ ಹಲವಾರು ತಜ್ಞರು ವಿರೋಧ ವ್ಯಕ್ತ ಪಡಿಸಿದ್ದಾರೆ.ಎಸ್‍ಬಿಐಯ ಆರ್ಥಿಕ ಸಲಹೆಗಾರಸೌಮ್ಯ ಕಾಂತಿ ಘೋಷ್, ಕೃಷಿ ತಜ್ಞ ಡಾ.ಎಂ.ಎಸ್. ಸ್ವಾಮಿನಾಥನ್ ಮೊದಲಾದವರು ಸಾಲ ಮನ್ನಾ ಮಾಡುವುದನ್ನು ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.