ADVERTISEMENT

ಭಾರೀ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ವಶ

ಪಿಟಿಐ
Published 3 ಏಪ್ರಿಲ್ 2019, 20:12 IST
Last Updated 3 ಏಪ್ರಿಲ್ 2019, 20:12 IST

ಪುಣೆ: ಇಲ್ಲಿನ ಜುನ್ನಾರ್ ತೆಹ್ಸಿಲ್‌ನಲ್ಲಿರುವ ತೋಟದ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಲಾದ ಬಾಂಬ್‌ ತಯಾರಿಕಾ ಸಾಮಗ್ರಿ, ನಾಡ ಪಿಸ್ತೂಲ್, ಪೈಪ್‌ ಬಾಂಬ್‌, ಡಿಟೋನೇಟರ್‌ಗಳು ಮತ್ತು ಗನ್‌ ಪೌಡರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭಯೋತ್ಪಾದನಾ ವಿರೋಧಿ ಘಟಕದ ಪೊಲೀಸರು ದಾಳಿ ನಡೆಸಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧಿಸಿ ರಾಜಾರಾಂ ಅಭಂಗ್‌ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹರಿತವಾದ ಆಯುಧಗಳು, ಬ್ಯಾಟರಿ ಸಹಿತ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಲೋಹದ ಹೆಲ್ಮೆಟ್‌, ರಕ್ಷಾ ಕವಚಗಳನ್ನೂ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಭಂಗ್‌ 2003ರಲ್ಲಿ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದ. ಮೋಟಾರ್‌ಸೈಕಲ್‌ನಲ್ಲಿ ಕಚ್ಚಾ ಬಾಂಬ್‌ ಇರಿಸಿ ಸ್ಫೋಟಿಸಿದ್ದ. ಘಟನೆಯಲ್ಲಿ ಪತ್ನಿ ಮತ್ತು ಮಕ್ಕಳು ಗಾಯಗೊಂಡಿದ್ದರು. ಅಭಂಗ್‌ನನ್ನು ಅಂದು ಬಂಧಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಶಸ್ತ್ರಾಸ್ತ್ರ ಕಾಯ್ದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂದೀಪ್‌ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.