ADVERTISEMENT

ಕಾಶ್ಮೀರದ ಶಾಲೆಯಲ್ಲಿ ಶಿಕ್ಷಕಿಯರು ಹಿಜಾಬ್ ಧರಿಸದಂತೆ ಸುತ್ತೋಲೆ: ವಿಪಕ್ಷಗಳ ಕಿಡಿ

ಪಿಟಿಐ
Published 27 ಏಪ್ರಿಲ್ 2022, 15:46 IST
Last Updated 27 ಏಪ್ರಿಲ್ 2022, 15:46 IST
ಹಿಜಾಬ್: ಪಿಟಿಐ ಸಂಗ್ರಹ ಚಿತ್ರ
ಹಿಜಾಬ್: ಪಿಟಿಐ ಸಂಗ್ರಹ ಚಿತ್ರ   

ಶ್ರೀನಗರ: ಶಾಲಾ ಅವಧಿಯಲ್ಲಿ ಹಿಜಾಬ್ ಧರಿಸದಂತೆ ತಮ್ಮ ಶಾಲಾ ಸಿಬ್ಬಂದಿ ಸೂಚಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಶಾಲೆಯೊಂದರ ಆಡಳಿತ ಮಂಡಳಿ ವಿವಾದದ ಕಿಡಿ ಹೊತ್ತಿಸಿದೆ. ಇದರ ವಿರುದ್ಧ ಕಾಶ್ಮೀರದ ಪ್ರಮುಖ ಪಕ್ಷಗಳ ಮುಖಂಡರು ಧ್ವನಿ ಎತ್ತಿದ್ದಾರೆ.

ಸೇನೆ ಮತ್ತು ಇಂದ್ರಾಣಿ ಬಾಲನ್ ಫೌಂಡೇಶನ್‌ನ ಅಡಿಯಲ್ಲಿ ಸ್ಥಾಪಿಸಲಾಗಿರುವ ಬಾರಾಮುಲ್ಲಾದ ಡಾಗರ್ ಪರಿವಾರ ಶಾಲೆಯ ಪ್ರಾಂಶುಪಾಲರು ಏಪ್ರಿಲ್ 25 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಶಾಲಾ ಸಮಯದಲ್ಲಿ ಹಿಜಾಬ್ ಧರಿಸುವುದನ್ನು ತಪ್ಪಿಸುವಂತೆ ಶಿಕ್ಷಕಿಯರು, ಸಿಬ್ಬಂದಿಗೆ ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೆ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಈ ಕುರಿತಂತೆ ಜನರ ಆಕ್ರೋಶದ ಬಳಿಕ ಬಳಿಕ ಎಚ್ಚೆತ್ತಿರುವ ಶಾಲೆಯು ಬುಧವಾರ, ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಿದೆ. ಹಿಜಾಬ್ (ತಲೆ ಹೊದಿಕೆ) ಪದವನ್ನು ‘ನಿಕಾಬ್’(ಮುಖದ ಮುಸುಕು) ಎಂದು ಬದಲಾಯಿಸಲಾಗಿದೆ.

ADVERTISEMENT

ಏಪ್ರಿಲ್ 25ರಂದು ಶಾಲೆ ಹೊರಡಿಸಿದ್ದ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಈ ಸುತ್ತೋಲೆಯನ್ನು ಬಲವಾಗಿ ಖಂಡಿಸಿದ್ದಾರೆ.

‘ಹಿಜಾಬ್‌ಗೆ ನಿರ್ಬಂಧ ಹೇರುವ ಈ ಸುತ್ತೋಲೆಯನ್ನು ನಾನು ಖಂಡಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ಆಳುತ್ತಿರಬಹುದು. ಆದರೆ, ಬೇರೆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮನೆಗಳನ್ನು ಬುಲ್ಡೋಜರ್ ಬಳಸಿ ಉರುಳಿಸಿದಂತೆ ಮತ್ತು ಹೆಣ್ಣುಮಕ್ಕಳ ಸ್ವಾತಂತ್ರ್ಯ ಕಸಿದಂತೆ ಇಲ್ಲಿ ಆಗುವುದಿಲ್ಲ. ನಮ್ಮ ನೆಲದ ಹುಡುಗಿಯರು ತಮ್ಮಆಯ್ಕೆಯ ಹಕ್ಕನ್ನು ಬಿಡುವುದಿಲ್ಲ’ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಇದು ರಾಜಕೀಯ ಲಾಭ ಪಡೆಯುವ ಪ್ರಯತ್ನ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

‘ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ನಮ್ಮ ಸಂವಿಧಾನದಲ್ಲಿ ನಮ್ಮದು ಜಾತ್ಯತೀತ ದೇಶ ಎಂದು ಹೇಳಲಾಗಿದೆ. ಅಂದರೆ ಇಲ್ಲಿ ಎಲ್ಲಾ ಧರ್ಮಗಳು ಸಮಾನ ಎಂದು ಪ್ರತಿಪಾದಿಸಲಾಗಿದೆ. ಇದರಲ್ಲಿ ಯಾವುದೇ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಕರ್ನಾಟಕದ ಮಾದರಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ತರುವ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.