ಪ್ರಾತಿನಿಧಿಕ ಚಿತ್ರ
ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಸೇನಾ ಪ್ರದೇಶದ ಫೋಟೊ ತೆಗೆದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ತ್ವೇಷಮಯ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆ ದೇಶದ ಎಲ್ಲಾ ಸೇನಾ ಪ್ರದೇಶಗಳು ಬಿಗಿ ಕಣ್ಗಾವಲಿನಲ್ಲಿವೆ.
‘ದಂಡು ವಲಯದ ಸೇನಾ ಪ್ರದೇಶಗಳ ಚಿತ್ರ ತೆಗೆದಯುತ್ತಿದ್ದ ಮೊಹಮ್ಮದ್ ಝುಬೇರ್ (32) ಹಾಗೂ ಮೊಹಮ್ಮದ್ ಇರ್ಫಾನ್ (22) ಎಂಬಿಬ್ಬರನ್ನು ಸೇನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಉದಯ್‌ಬನ್ ಬಗ್ರಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಯಾವುದೇ ದುರುದ್ದೇಶ ಇಲ್ಲದೇ, ಸಾಮಾನ್ಯವಾಗಿ ಫೋಟೊ ತೆಗೆದಿದ್ದೇವೆ ಎಂದು ಅವರು ವಿಚಾರಣೆ ವೇಳೆ ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೇವೆ. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಪರ ಬರಹ: ವ್ಯಕ್ತಿ ಬಂಧನ
ಮುಜಫ್ಫರ್‌ನಗರ: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಪೋಸ್ಟ್ ಹಾಕಿದ ಕಾರಣ ವ್ಯಕ್ತಿಯೊಬ್ಬನನ್ನು ಪೊಲೀಸರು ಶನಿವಾರ ಇಲ್ಲಿ ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಪಾಕಿಸ್ತಾನವನ್ನು ಬೆಂಬಲಿಸಿ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶನಿವಾರ ಆತನನ್ನು ಬಂಧಿಸಿಲಾಗಿದೆ’ ಎಂದಿದ್ದಾರೆ.
ಏತನ್ಮಧ್ಯೆ, ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದ ಅನ್ವರ್ ಜಮೀಲ್ ಎಂಬಾತನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕಾರಣ ಆತನನ್ನು ಶುಕ್ರವಾರ ಬಂಧಿಸಲಾಗಿದೆ. ಸ್ನೇಹಿತನ ಜತೆಗೆ ಬೆಟ್ಟಿಂಗ್ ಕಟ್ಟಿದ್ದಕ್ಕಾಗಿ ಆ ರೀತಿ ಘೋಷಣೆ ಕೂಗಿದ್ದೆ, ಅದು ಹಳೇ ವಿಡಿಯೊ ಎಂದು ಜಮೀಲ್ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.