ADVERTISEMENT

ಸರ್ದಾರ್ ಪಟೇಲ್ ಅವರ ಏಕೀಕೃತ ಭಾರತದ ಕನಸನ್ನು ನನಸಾಗಿಸಿದ ಮೋದಿ: ಅಮಿತ್ ಶಾ

ಪಿಟಿಐ
Published 31 ಅಕ್ಟೋಬರ್ 2025, 11:13 IST
Last Updated 31 ಅಕ್ಟೋಬರ್ 2025, 11:13 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

–ಪಿಟಿಐ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕೀಕೃತ ಭಾರತದ ಕನಸನ್ನು ನನಸಾಗಿಸಿದವರು ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ADVERTISEMENT

ಇಲ್ಲಿನ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯಂದು 'ಏಕತಾ ಓಟ'ಕ್ಕೆ ಚಾಲನೆ ನೀಡಿದ ಶಾ, ಭಾರತದ ಸ್ವಾತಂತ್ರ್ಯದ ನಂತರ, ಬ್ರಿಟಿಷರು ದೇಶವನ್ನು 562 ರಾಜಪ್ರಭುತ್ವದ ರಾಜ್ಯಗಳಾಗಿ ವಿಂಗಡಿಸಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.

‘ಆ ಸಮಯದಲ್ಲಿ, ಈ 562 ರಾಜಪ್ರಭುತ್ವದ ರಾಜ್ಯಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವುದು ಅಸಾಧ್ಯವೆಂದು ಇಡೀ ಜಗತ್ತು ಭಾವಿಸಿತ್ತು. ಆದರೆ, ಅಲ್ಪಾವಧಿಯಲ್ಲಿಯೇ ಸರ್ದಾರ್ ಪಟೇಲ್ ಎಲ್ಲ 562 ರಾಜಪ್ರಭುತ್ವದ ರಾಜ್ಯಗಳನ್ನು ಸಂಯೋಜಿಸುವ ಮಹತ್ವದ ಕಾರ್ಯವನ್ನು ಸಾಧಿಸಿದರು. ಇಂದು ನಾವು ನೋಡುತ್ತಿರುವ ಆಧುನಿಕ ಭಾರತದ ನಕ್ಷೆಯು ಅವರ ದೃಷ್ಟಿಕೋನ ಮತ್ತು ಪ್ರಯತ್ನಗಳ ಫಲಿತಾಂಶವಾಗಿದೆ’ಎಂದು ಅವರು ಹೇಳಿದರು.

ಕಥಿಯಾವಾರ್, ಭೋಪಾಲ್, ಜುನಾಗಢ್, ಜೋಧ್‌ಪುರ, ತಿರುವಾಂಕೂರು ಮತ್ತು ಹೈದರಾಬಾದ್‌ನಂತಹ ಪ್ರದೇಶಗಳು ಪ್ರತ್ಯೇಕವಾಗಿ ಉಳಿಯಲು ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡಿದವು, ಆದರೆ, ಸರ್ದಾರ್ ಪಟೇಲ್ ಅವರ ಉಕ್ಕಿನಂತಹ ಇಚ್ಛಾಶಕ್ತಿ ಮತ್ತು ಅಚಲ ದೃಢಸಂಕಲ್ಪವು ಅವೆಲ್ಲವನ್ನೂ ಒಟ್ಟುಗೂಡಿಸಿ ಒಂದು ಅಖಂಡ ಭಾರತವನ್ನು ರೂಪಿಸಿತು ಎಂದು ಶಾ ಹೇಳಿದ್ದಾರೆ.

'370ನೇ ವಿಧಿಯಿಂದಾಗಿ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಏಕೀಕರಿಸುವುದು ಅಪೂರ್ಣವಾಗಿ ಉಳಿದ ಏಕೈಕ ಕಾರ್ಯವಾಗಿತ್ತು, ಆದರೆ, ಪ್ರಧಾನಿ ಮೋದಿ ಸರ್ದಾರ್ ಪಟೇಲ್ ಅವರ ಆ ಅಪೂರ್ಣ ಕಾರ್ಯವನ್ನು ಪೂರೈಸಿದರು. ಇಂದು ನಮ್ಮ ಮುಂದೆ ನಿಜವಾದ ಏಕೀಕೃತ ಭಾರತವಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸರ್ದಾರ್ ಪಟೇಲ್ ಅವರಿಗೆ ನಿಜವಾಗಿಯೂ ಅರ್ಹವಾದ ಗೌರವವನ್ನು ನೀಡಲಿಲ್ಲ. ಅವರಂತಹ ಮಹಾನ್ ವ್ಯಕ್ತಿತ್ವಕ್ಕೆ 41 ವರ್ಷಗಳ ವಿಳಂಬದ ನಂತರ ಭಾರತ ರತ್ನ ಗೌರವ ನೀಡಲಾಯಿತು ಎಂದಿದ್ದಾರೆ.

‘ದೇಶದಲ್ಲಿ ಎಲ್ಲಿಯೂ ಅವರ ಸ್ಮಾರಕವನ್ನು ನಿರ್ಮಿಸಲಾಗಿಲ್ಲ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಏಕತಾ ಪ್ರತಿಮೆಯ ಪರಿಕಲ್ಪನೆಯನ್ನು ರೂಪಿಸಿದರು. ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ಭವ್ಯ ಸ್ಮಾರಕವನ್ನು ನಿರ್ಮಿಸಿದರು’ಎಂದು ಕೊಂಡಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.