ADVERTISEMENT

ಅರುಣಾಚಲ ಗಡಿಯಲ್ಲಿ ಘರ್ಷಣೆ: 200 ಚೀನಾ ಯೋಧರನ್ನು ತಡೆದ ಭಾರತದ ಪಡೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2021, 4:12 IST
Last Updated 8 ಅಕ್ಟೋಬರ್ 2021, 4:12 IST
ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ
ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ   

ನವದೆಹಲಿ: ಭಾರತ ಮತ್ತು ಚೀನಾ ಯೋಧರ ಮಧ್ಯೆ ಮತ್ತೆ ಘರ್ಷಣೆ ನಡೆದಿದೆ. ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪದಲ್ಲಿ ಚೀನಾದ ಸುಮಾರು 200 ಯೋಧರನ್ನು ಹಿಮ್ಮೆಟ್ಟಿಸಲಾಗಿದೆ.

ಕಳೆದ ವಾರ ಚೀನಾದ ಗಡಿಗೆ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಗಡಿಗೆ ಸಮೀಪ ಬಂದಿದ್ದ ಚೀನಾದ ಸುಮಾರು 200 ಯೋಧರನ್ನು ಭಾರತದ ಪಡೆಗಳು ತಡೆ ಹಿಡಿದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಬಗೆಹರಿಸಿಕೊಂಡ ನಂತರದಲ್ಲಿ ಎರಡೂ ದೇಶಗಳ ಪಡೆಗಳು ಹಿಂದಿರುಗಿವೆ. ಕೆಲವು ಗಂಟೆಗಳ ವರೆಗೂ ಭಾರತ–ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ADVERTISEMENT

ಈ ನಡುವೆ, ಬಾಕಿ ಉಳಿದಿರುವ ಪೂರ್ವ ಲಡಾಖ್‌ ಭಾಗದ ಗಡಿಯ ವಿಚಾರಗಳನ್ನು ಬಗೆಹರಿಸುವ ಬಗ್ಗೆ ಚೀನಾ ಶೀಘ್ರದಲ್ಲೇ ಕ್ರಮಕೈಗೊಳ್ಳುವ ನಿರೀಕ್ಷೆ ಇರುವುದಾಗಿ ಭಾರತ ಗುರುವಾರ ಹೇಳಿದೆ.

ಚೀನಾದ ಕಡೆಯಿಂದ ಆಕ್ರಮಣಕಾರಿ ಮತ್ತು ಏಕಪಕ್ಷೀಯ ಧೋರಣೆಗಳು ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್‌ ಬಗಚಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರು ಇತ್ತೀಚೆಗಷ್ಟೇ ತಜಕಿಸ್ತಾನದಲ್ಲಿ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯಿ ಅವರನ್ನು ಭೇಟಿ ಮಾಡಿ, ಭಾರತದ ನಿಲುವು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.